ಅಡುಗೆ ಅನಿಲ ಸಿಲಿಂಡರ್ ಮಿತಿ ರದ್ದುಗೊಳಿಸುವ ಪ್ರಸ್ತಾವನೆಯಿಲ್ಲ: ಬಿಜೆಪಿ

ಶನಿವಾರ, 25 ಅಕ್ಟೋಬರ್ 2014 (14:36 IST)
ಪ್ರತಿ ಕುಟುಂಬಕ್ಕೂ ವರ್ಷಕ್ಕೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿರುವ 12 ಎಲ್‌ಪಿಜಿ ಸಿಲಿಂಡರ್‌ಗಳ ಮಿತಿ ಕಡಿಮೆ ಮಾಡುವ  ಉದ್ದೇಶ ಸರ್ಕಾರಕ್ಕೆ ಇಲ್ಲ.  ಅಲ್ಲದೆ ಮುಂದಿನ ಜೂನ್‌ ಒಳಗೆ ಎಲ್ಲ ಗ್ರಾಹಕರಿಗೂ ನಗದು ರೂಪದಲ್ಲಿ ಸಬ್ಸಿಡಿ ನೀಡುವ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದರು.
 
ತಿಂಗಳಿಗೆ ಒಂದರಂತೆ ವರ್ಷದಲ್ಲಿ ಸಬ್ಸಿಡಿ ದರದಲ್ಲಿ ೧೨ ಎಲ್‌ಪಿಜಿ ಸಿಲಿಂಡರ್‌ ನೀಡಲಾಗುತ್ತದೆ ಎಂದು ಈ ಹಿಂದಿನ ಸರ್ಕಾರ ಹೇಳಿತ್ತು.ಆದರೆ ಆಗಸ್ಟ್ ತಿಂಗಳಿನಲ್ಲಿ ಎನ್‌ಡಿಎ ಸರ್ಕಾರ ಈ ನಿಯಮದಲ್ಲಿ ಬದಲಾವಣೆ ಮಾಡಿತು. ಆ ಪ್ರಕಾರ ಸಬ್ಸಿಡಿ ದರದಲ್ಲಿ ವರ್ಷಕ್ಕೆ ನೀಡುವ ೧೨ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರು ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.
 
ಸದ್ಯ ನೇರ ನಗದು ಪಾವತಿ ವ್ಯವಸ್ಥೆಯನ್ನು ದೇಶದ 54 ಜಿಲ್ಲೆಗಳಲ್ಲಿ ಜಾರಿಗೊಳಿಸಿ, ನಂತರ ಜ.1ರಿಂದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಅಂತಿಮವಾಗಿ ಬರುವ ಜೂನ್‌ ವೇಳೆಗೆ ಬಹುತೇಕ ಎಲ್‌ಪಿಜಿ ಗ್ರಾಹಕರೂ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಸಚಿವರು ಹೇಳಿದರು.
 
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನ ಧನ ಯೋಜನೆಯಡಿ ಬ್ಯಾಂಕ್ ಖಾತೆ ತೆರೆದವರಿಗೂ ಇದರಿಂದ ಅನುಕೂಲವಾಗಲಿದೆ. ಈತನಕ ಈ ಯೋಜನೆಯಡಿ 6 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದ್ದು, ವರ್ಷದ ಕೊನೆಯ ಹೊತ್ತಿಗೆ ಇನ್ನೂ 4 ಕೋಟಿ ಖಾತೆಗಳನ್ನು ತೆರೆಯುವ ಗುರಿ ಇದೆ.
 
ಸದ್ಯ ಬ್ಯಾಂಕ್ ಖಾತೆ ಸಂಖ್ಯೆಗೆ ಎಲ್‌ಪಿಜಿ ಗ್ರಾಹಕ ಸಂಖ್ಯೆಯನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಇದು ಮುಗಿದ ಮೇಲೆ ಫಲಾನುಭವಿಗಳ ಖಾತೆಗೆ ನೇರವಾಗಿ ಸಬ್ಸಿಡಿಯನ್ನು ಹಾಕಬಹುದು. 
 
ಆಧಾರ್‌ ಕಡ್ಡಾಯವಲ್ಲ: ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ ಪಡೆಯುವುದಕ್ಕೆ ‘ಆಧಾರ್‌ ಕಡ್ಡಾಯವಲ್ಲ ಎಂದೂ ಪ್ರಧಾನ್‌ ವಿವರಿಸಿದರು.

ವೆಬ್ದುನಿಯಾವನ್ನು ಓದಿ