ಲೋಕಸಭೆ ಉಪಚುನಾವಣೆ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

ಮಂಗಳವಾರ, 24 ನವೆಂಬರ್ 2015 (20:33 IST)
ಕಳೆದ 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ದಾಖಲಿಸಿದ್ದ ಬಿಜೆಪಿ, ರತ್ಲಮ್ -ಝಾಬುವಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ಕಂಡು ಹಿನ್ನೆಡೆ ಅನುಭವಿಸಿದೆ.  
 
ಬಿಜೆಪಿ ಅಧಿಕಾರವಿರುವ ರಾಜ್ಯದಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ಜಯಗಳಿಸಿದ್ದರಿಂದ ಕಾಂಗ್ರೆಸ್ ಬಲ ಸಂಸತ್ತಿನಲ್ಲಿ 45 ಕ್ಕೆ ಏರಿದೆ. ಬಿಜೆಪಿ ಸಂಸದರ ಸಂಖ್ಯಾಬಲ 281ಕ್ಕೆ ಕುಸಿದಿದೆ.
 
ಬಿಜೆಪಿ ಅಭ್ಯರ್ಥಿ ನಿರ್ಮಲಾ ಭೂರಿಯಾ ಎದುರಾಳಿ ಕಾಂಗ್ರೆಸ್ ಪಕ್ಷದ ಕಾಂತಿಲಾಲ್ ಭೂರಿಯಾ ವಿರುದ್ಧ ಸೋಲನುಭವಿಸಿದ್ದಾರೆ.
 
ದಿವಂಗತ ದೀಲಿಪ್ ಸಿಂಗ್ ಭೂರಿಯಾ ಸಾವಿನಿಂದಾಗಿ ತೆರವಾದ ಕ್ಷೇತ್ರಕ್ಕೆ ಅವರ ಪುತ್ರಿ ನಿರ್ಮಲಾ ಭೂರಿಯಾ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆದರೆ, ಚುನಾವಣೆಯಲ್ಲಿ ಅನುಕಂಪದ ಅಲೆ ಕೆಲಸ ಮಾಡದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಕಾಂತಿಲಾಲ್ ಭೂರಿಯಾ ಸುಲಭ ಜಯಗಳಿಸಿದ್ದಾರೆ.
 
ಉಪಚುನಾವಣೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ಗೆ ಪ್ರತಿಷ್ಠೆಯ ವಿಷಯವಾಗಿದ್ದರಿಂದ ರತ್ಲಮ್ ಲೋಕಸಭಾ ಕ್ಷೇತ್ರದಲ್ಲಿ ಆರು ದಿನಗಳಲ್ಲಿ 27 ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು.  
 
ರತ್ಲಮ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸೋಲು ಆರಂಭವಾಗಿದ್ದು, ದೇಶಾದ್ಯಂತ ಹರಡಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕಾಂತಿಲಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ