ಫೇಸ್‌ಬುಕ್ ಚಾಟ್ ಮಾಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ

ಶುಕ್ರವಾರ, 27 ಮಾರ್ಚ್ 2015 (13:27 IST)
ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದುದನ್ನು ನೋಡಿ ತಂದೆ ವಾಗ್ದಂಡ ನೀಡಿದ್ದಕ್ಕೆ ನೊಂದ 14 ವರ್ಷದ ಬಾಲಕನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 
ಅಲಹಾಬಾದಿನ ನೈನಿಯ ಪರಸ ನಗರ್‌ದಲ್ಲಿ ಈ ಘಟನೆ ನಡೆದಿದ್ದು, 9 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಬುಧವಾರ ರಾತ್ರಿ ತನ್ನ ಮೊಬೈಲಿನಲ್ಲಿ ಸ್ನೇಹಿತರೊಂದಿಗೆ ಫೇಸ್‌ಬುಕ್ ಚಾಟ್ ಮಾಡುತ್ತಿದ್ದನೆನ್ನಲಾಗಿದೆ. ಮಧ್ಯರಾತ್ರಿ ಸಮಯದಲ್ಲಿ ಮಗ ನಿದ್ದೆ ಮಾಡದೇ ಚಾಟ್ ಮಾಡುತ್ತಿರುವುದರಿಂದ ಕೆರಳಿದ ತಂದೆ ಮಗನಿಗೆ ಬೈದು ಮೊಬೈಲನ್ನು ಕಿತ್ತುಕೊಂಡು ಎಸೆದಿದ್ದಾರೆ.
 
ಇದರಿಂದ ಅಸಮಾಧಾನಗೊಂಡ ಹುಡುಗ ತಕ್ಷಣ ತನ್ನ ಕೋಣೆಯ ಬಾಗಿಲು ಹಾಕಿಕೊಂಡಿದ್ದಾನೆ. ಮರುದಿನ ಬೆಳಿಗ್ಗೆ ಆತ ಗುಂಡು ಹಾರಿಸಿಕೊಂಡಿದ್ದಾನೆ. ಮಗನ ಕೋಣೆಯಿಂದ ಗುಂಡಿನ ಸದ್ದು ಕೇಳಿದ ಪಾಲಕರು ಬಾಗಿಲು ಒಡೆದು ಒಳ ಹೋದಾಗ ಹುಡುಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೋಚರಿಸಿದೆ. 
 
ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
 
ಘಟನೆ ನಡೆದ ಸ್ಥಳದಿಂದ ಪೊಲೀಸರು ಒಂದು .32 ಬೋರ್ ರಿವಾಲ್ವರ್‌ನ್ನು ವಶಪಡಿಸಿಕೊಂಡಿದ್ದಾರೆ. ರಿವಾಲ್ವರ್ ಆತನ ತಂದೆಗೆ  ಸೇರಿದ್ದು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ