ಶೌಚಾಲಯ ಕಟ್ಟಿಸಿ ಪತ್ನಿಯನ್ನು ಮರಳಿ ಪಡೆದ ಪತಿ ಮಹಾಶಯ

ಶನಿವಾರ, 3 ಅಕ್ಟೋಬರ್ 2015 (16:12 IST)
ಮನೆಯಲ್ಲಿ ಶೌಚಾಲಯ ಕಟ್ಟಿಸುವವರೆಗೆ ಮರಳುವುದಿಲ್ಲ ಎಂದು ಪತಿಯ ವಿರುದ್ಧ ಆಕ್ರೋಶಗೊಂಡು 19 ತಿಂಗಳ ಹಿಂದೆ ಸೀಮಾ ಪಟೇಲ್ ತವರಿಗೆ ತೆರಳಿದ್ದಳು. ಇದರಿಂದ ಆತಂಕಗೊಂಡ ಕುಟುಂಬದ ಹಿರಿಯ ಸದಸ್ಯರು ಆಕೆಯ ಪತಿಗೆ ಶೌಚಾಲಯ ನಿರ್ಮಾಣಕ್ಕಾಗಿ ಒಂದು ತಿಂಗಳ ಗಡುವು ನೀಡಿದ್ದರು ಎನ್ನಲಾಗಿದೆ.  
 
ಪತ್ನಿಯ ನಿರ್ಧಾರದಿಂದ ಕಂಗಾಲಾದ ಪತಿ ಮಹಾಶಯ, ಒಂದು ತಿಂಗಳ ಅವಧಿಯಲ್ಲಿ ಶೌಚಾಲಯ ಕಟ್ಟಿಸಿ ಮತ್ತೆ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.   
 
ಪಿಪಾನಿಯಾ ಗ್ರಾಮದ ನಿವಾಸಿಯಾದ ಸೀಮಾ, ಚೌಕಿಪುರಾ ಗ್ರಾಮದ ನಿವಾಸಿಯಾದ ಮೋಹನ್ ಎಂಬಾತನನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದಳು. ವಿವಾಹವಾಗಿ ಪತಿಯ ಮನೆಗೆ ಬಂದ ಸೀಮಾಳಿಗೆ ಮನೆಯಲ್ಲಿ ಶೌಚಾಲಯವಿಲ್ಲದಿರುವುದು ಅಸಮಾಧಾನ ತಂದಿತ್ತು. ಹಲವಾರು ಬಾರಿ ಪತಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.    
 
ಪತಿಯ ನಿರ್ಲಕ್ಷದಿಂದ ಬೇಸತ್ತ ಸೀಮಾ, ಪತಿಯಿಂದ ದೂರವಾಗಿ 19 ತಿಂಗಳಗಳ ಕಾಲ ತವರಿಗೆ ತೆರಳಿದ್ದಳು. ಆದಾಗ್ಯೂ  ಮೋಹನ್ ಶೌಚಾಲಯ ನಿರ್ಮಾಣಕ್ಕಾಗಿ ಗಮನಹರಿಸಿರಲಿಲ್ಲ ಎನ್ನಲಾಗಿದೆ.  
 
ಪತ್ನಿ ಸೀಮಾ ಮತ್ತು ಆಕೆಯ ಕುಟುಂಬದವರ ವರ್ತನೆ ವಿರುದ್ಧ ಮೋಹನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದಾಗಿ ಉಭಯ ಕುಟುಂಬಗಳು ಒಂದು ಕಡೆ ಸೇರಿ ಸಮಸ್ಯೆ ಬಗೆಹರಿಸಲು ಯತ್ನಿಸಿ ಮೋಹನ್‌ಗೆ ಶೌಚಾಲಯ ಕಟ್ಟಲು ಒಂದು ತಿಂಗಳು ಗಡುವು ನೀಡಿದ್ದರು.  
 
ಇದೀಗ ಶೌಚಾಲಯ ಕಟ್ಟಿಸಿ ಪತ್ನಿಯನ್ನು ಮನೆಗೆ ಕರೆಸಿಕೊಂಡ ಪತಿ ಮೋಹನ್, ತಮ್ಮ ಪತ್ನಿ ಸೀಮಾಳ ಬಗೆಗಿನ ಗೌರವದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಪ್ರತಿಯೊಂದು ಮನೆಯಲ್ಲಿ ಶೌಚಾಲಯವಿರಬೇಕು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ