ಕಲಾಂ ಅಂತ್ಯಸಂಸ್ಕಾರದ ದಿನ ಮದ್ಯದಂಗಡಿ ಮುಚ್ಚುವಂತಿಲ್ಲ: ಮದ್ರಾಸ್ ಹೈಕೋರ್ಟ್

ಬುಧವಾರ, 29 ಜುಲೈ 2015 (20:43 IST)
ತಮಿಳುನಾಡಿನಲ್ಲಿ ಶೇ,30 ರಷ್ಟು ಜನರಿಗೆ ಮದ್ಯ ಸೇವನೆ ತುಂಬಾ ಅಗತ್ಯವಾದ ಪಾನೀಯವಾಗಿದ್ದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅಂತ್ಯಸಂಸ್ಕಾರದ ದಿನದಂದು ಸರಕಾರ ಮದ್ಯದಂಗಡಿಗಳನ್ನು ಮುಚ್ಚುವಂತೆ ಘೋಷಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. 
ನ್ಯಾಯಮೂರ್ತಿ ಸಿ.ಎಸ್.ಕರ್ನನ್ ನೇತೃತ್ವದ ನ್ಯಾಯಪೀಠ, ಅಗ್ನಿಶಾಮಕ ದಳ, ಪೊಲೀಸ್, ಮತ್ತು ಹಾಲು ಸರಬರಾಜು ಸೇವೆ ಅಗತ್ಯವಾಗಿರುವಂತೆ ಮದ್ಯ ಕೂಡಾ ರಾಜ್ಯದ ಶೇ.30ರಷ್ಟು ಜನರಿಗೆ ಅಗತ್ಯವಾಗಿದೆ. ಪಂಚತಾರಾ ಹೋಟೆಲ್‌ಗಳಲ್ಲಿ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮದ್ಯ ಸರಬರಾಜು ಮಾಡಲಾಗುತ್ತದೆ. ಪಂಚಾತಾರಾ ಹೋಟೆಲ್‌ಗಳಿಗೆ ಹೋದವರು ಮದ್ಯ ಸೇವನೆಯ ಸೌಲಭ್ಯ ಪಡೆಯಬಹುದಾದರೇ ಸಾಮಾನ್ಯ ಜನರು ಯಾಕೆ ಮದ್ಯ ಸೇವನೆಯ ಸೌಲಭ್ಯ ಪಡೆಯಬಾರದು ಎಂದು ಪ್ರಶ್ನಿಸಿದ್ದಾರೆ.   
 
ಫೋರಂ ಫಾರ್ ಸೋಶಿಯಲ್ ಜಸ್ಟಿಸ್ ಪರ ವಕೀಲ ಕೆ.ಬಾಲು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅಂತ್ಯಸಂಸ್ಕಾರದ ದಿನದಂದು ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಸರಕಾರ ಆದೇಶ ನೀಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ. 
 
ತಮಿಳುನಾಡು ಸರಕಾರ ಎಲ್ಲಾ ಸರಕಾರ ಕಚೇರಿಗಳು, ಶಾಲಾ ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಸಾರ್ವಜನಿಕ ರಜೆ ಘೋಷಿಸಿದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಕರ್ನನ್ ಮದ್ಯದಂಗಡಿಗಳಿಗೆ ರಜೆ ಘೋಷಿಸದಂತೆ ಸರಕಾರಕ್ಕೆ ತಾಕೀತು ಮಾಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ