ಮದರಸಾಗಳಿಂದ ‘ಭಯೋತ್ಪಾದನೆ’ ಶಿಕ್ಷಣ: ಸಾಕ್ಷಿ ಮಹಾರಾಜ್

ಸೋಮವಾರ, 15 ಸೆಪ್ಟಂಬರ್ 2014 (09:01 IST)
ಮದರಸಾಗಳು ಭಯೋತ್ಪಾದನೆ ಕುರಿತು ಶಿಕ್ಷಣ ನೀಡುತ್ತಿವೆ ಮತ್ತು ಜಿಹಾದಿಗಳನ್ನು ಹುಟ್ಟು ಹಾಕುತ್ತಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎಲ್ಲಿ 20 ರಿಂದ 35 ಪ್ರತಿಶತ ಮುಸ್ಲಿಂ ಸಮುದಾಯದವರು ಇರುತ್ತಾರೋ ಅಲ್ಲಿ ಕೋಮುಗಲಭೆಗಳು ನಡೆಯುತ್ತವೆ ಎಂದು ಬಿಜೆಪಿಯ ಇನ್ನೊಬ್ಬ ನಾಯಕ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ ಬೆನ್ನಲ್ಲೇ  ಸಾಕ್ಷಿ ಮಹಾರಾಜ್ ಈ ಮಾತುಗಳನ್ನಾಡಿದ್ದಾರೆ. 
 
ಕನ್ನೌಜ್ ಜಿಲ್ಲೆಯ ನಾಡೆಮೌ ಎಂಬಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಉನ್ನಾವೊ ಕ್ಷೇತ್ರದ ಸಂಸದ ಸಾಕ್ಷಿ ಮಹರಾಜ್ , ''ಮದರಸಾಗಳು ಭಯೋತ್ಪಾದನೆ ಕುರಿತು ಶಿಕ್ಷಣ ನೀಡುತ್ತಿವೆ. ಉಗ್ರವಾದಿಗಳು ಮತ್ತು ಜಿಹಾದಿಗಳನ್ನು ಹುಟ್ಟುಹಾಕುತ್ತಿವೆ.  ಇದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಿನ್ನಡೆಯುಂಟುಮಾಡಿದೆ '' ಎಂದು ಅಭಿಪ್ರಾಯಪಟ್ಟರು.
 
''ಮುಸ್ಲಿಂ ಧಾರ್ಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ರಾಷ್ಟ್ರೀಯತೆಯ ಬಗ್ಗೆ ಬೋಧಿಸುತ್ತಿಲ್ಲ. ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರಿಸಿದ ಒಂದು ಮದರಸಾವನ್ನು ತೋರಿಸಿ ನೋಡೋಣ,'' ಎಂದು ಅವರು ಸವಾಲೆಸೆದರು.
 
''ಮುಸ್ಲಿಂ ಯುವಕರು ಇತರ ಸಮುದಾಯದ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಸರಕಾರದಿಂದ ದತ್ತಿ ಪಡೆಯುತ್ತಿರುವ ಈ ಮದರಸಾಗಳು ರಾಷ್ಟ್ರೀಯತೆಯ ಬಗ್ಗೆ ಬೋಧಿಸುತ್ತಿಲ್ಲ. ಆದರೆ, ನೈತಿಕತೆ ನಡೆ ಅನುಸರಿಸುತ್ತಿರುವ ನಮ್ಮ ಶಾಲೆಗಳಿಗೆ ಸರಕಾರದಿಂದ ಬಿಡಿಗಾಸೂ ಸಿಗುತ್ತಿಲ್ಲ,'' ಎಂದು ಅಸಮಾಧಾನ ವ್ಯಕ್ತ ಪಡಿಸಿದ ಅವರು ಕೇಂದ್ರದಲ್ಲೀಗ ರಾಷ್ಟ್ರೀಯತಾವಾದಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಆಂತರಿಕವಾಗಿ ದೇಶ ಎದುರಿಸುತ್ತಿರುವ ಆತಂಕಗಳನ್ನು ಎತ್ತಿ ತೋರಿಸಲು ನಾನು ಪ್ರಯತ್ನಿಸಿದ್ದೇನೆ,'' ಎಂದು  ಮಹಾರಾಜ್ ಹೇಳಿದ್ದಾರೆ. 
 
ಸಾಕ್ಷಿ ಅವರ ಹೇಳಿಕೆಯು ಕೋಮು ದಳ್ಳುರಿ ಹೊತ್ತಿಸುವ ಪ್ರಯತ್ನವಾಗಿದೆ ಎಂದು ಉತ್ತರ ಪ್ರದೇಶದ ಪ್ರತಿಪಕ್ಷಗಳು ಟೀಕಿಸಿವೆ.
 
ತಮ್ಮ ಪಕ್ಷದ ನಾಯಕರು ನೀಡುತ್ತಿರುವ ಈ ಬಗೆಯ ಹೇಳಿಕೆಗಳಿಂದ ಬಿಜೆಪಿ  ತನ್ನನ್ನು ದೂರವಿರಿಸಿಕೊಂಡಿದೆ. 

ವೆಬ್ದುನಿಯಾವನ್ನು ಓದಿ