ಮೋದಿ ಸರಕಾರ ಮೇ 26 ರಂದು ಒಂದು ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಅಚ್ಛೇ ದಿನ್ ಪುಣ್ಯ ತಿಥಿ ಆಚರಿಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಲು ಮಹಾರಾಷ್ಟ್ರ ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿ ಚುನಾವಣಾ ಪೂರ್ವ ನೀಡಿದ್ದ ಹೇಳಿಕೆ ಅಚ್ಛೇ ದಿನ್‌ನ ತಿಥಿಯನ್ನು ಆಚರಿಸುವುದರ ಮೂಲಕ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಮಹಾರಾಷ್ಟ್ರ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಚವನ್, ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅದನ್ನು ಪೂರೈಸಲು ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಮಾಧ್ಯಮಗಳ ಬಳಿ ಹೇಳಿದ್ದಾರೆ.
ಕಳೆದೊಂದು ವರ್ಷದಲ್ಲಿ ಕೇಂದ್ರ ಸರ್ಕಾರ, ತಾನು ಭರವಸೆ ನೀಡಿದಂತೆ ಹಣದುಬ್ಬರ ಇಳಿಕೆ, ಉದ್ಯೋಗ ಸೃಷ್ಟಿ ಸುಧಾರಣೆ, ಕಪ್ಪುಹಣ ಮರಳಿ ತಂದು ಪ್ರತಿ ನಾಗರಿಕನ ಖಾತೆಯಲ್ಲಿ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ವ್ಯಾಪಾರ ಬೆಲೆ, ಭಯೋತ್ಪಾದನೆ ಮತ್ತು ಪಾಕ್, ಚೀನಾಗಳನ್ನು ದೃಢವಾಗಿ ಎದುರಿಸುವ ಕುರಿತಂತೆ ಈಡೇರಿಸಲು ವಿಫಲವಾಗಿದೆ ಎಂದು ಚವನ್ ಆರೋಪಿಸಿದ್ದಾರೆ.