ಶೌಚಾಲಯ ನಿರ್ಮಿಸಲು ಮಂಗಳಸೂತ್ರವನ್ನೇ ಮಾರಿದ ಮಹಿಳೆ

ಶುಕ್ರವಾರ, 7 ನವೆಂಬರ್ 2014 (12:30 IST)
ಶೌಚಾಲಯ ನಿರ್ಮಾಣ ಮಾಡಲು ಪಣ ತೊಟ್ಟ ಮಹಿಳೆಯೊಬ್ಬಳು ತನ್ನ ಮಂಗಳಸೂತ್ರವನ್ನೇ ಮಾರಾಟ ಮಾಡಿದ ದಿಟ್ಟತನದ, ಮಾದರಿ ಪ್ರಸಂಗ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

 
ವಾಶಿಂ ಜಿಲ್ಲೆಯ ಸೈಖೇಡಾ ಗ್ರಾಮದ ಸಂಗೀತಾ ಅವಹಾಲೆ ಅವರ ಸಂಕಲ್ಪವನ್ನು ಮೆಚ್ಚಿದ ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜಾ ಮುಂಡೆ ಗುರುವಾರ ಅವರನ್ನು ಸನ್ಮಾನಿಸಿದ್ದಾರೆ. 
ಮೋದಿಯವರ ಸ್ವಚ್ಛತಾ ಅಭಿಯಾನಕ್ಕೆ ಈ ಮಟ್ಟದಲ್ಲಿ ಬೆಂಬಲ ವ್ಯಕ್ತ ಪಡಿಸಿದ ಮಹಿಳೆಗೆ ಸಚಿವೆ ಪಂಕಜಾ ಬಂಗಾರದ ನೆಕ್ಲೆಸ್‌ನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದ್ದಾರೆ.
 
ಸಂಗೀತಾರ ಕಥೆ, ಗ್ರಾಮೀಣ ಮಹಾರಾಷ್ಟ್ರದ ಹಲವಾರು ಮಹಿಳೆಯರ ತೆರೆದ ಮಲವಿಸರ್ಜನೆಯ ಸಮಸ್ಯೆಯನ್ನೇ ಹೋಲುತ್ತದೆ. ಸಂಗೀತಾರ ಹೆತ್ತವರ ಮನೆಯಲ್ಲಿ ಶೌಚಾಲಯವಿತ್ತು. ಆದರೆ  ಅವರ  ಗಂಡನ ಮನೆಯಲ್ಲಿ ಶೌಚಾಲಯವಿರಲಿಲ್ಲ. ಆ ಊರಿನ ಹೆಚ್ಚಿನ ಮಹಿಳೆಯರು ರಸ್ತೆ ಬದಿಯಲ್ಲಿಯೇ ಮಲವಿಜರ್ಸನೆಗೆ ಹೋಗುತ್ತಿದ್ದರು. 
 
"ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ನಾವು ಎದ್ದು ನಿಲ್ಲಬೇಕಿತ್ತು. ಕಳೆದ 12 ವರ್ಷಗಳಿಂದ ನಾನು ಮುಜುಗರದ ಸನ್ನಿವೇಶವನ್ನು ಎದುರಿಸುತ್ತಿದ್ದೆ. ಶೌಚಾಲಯ ನಿರ್ಮಿಸೋಣ ಎಂದು ಪತಿಯಲ್ಲಿ ಎಷ್ಟು ಹೇಳಿಕೊಂಡರೂ ಅವರು ನನ್ನ ಕೋರಿಕೆಗೆ ಕಿವುಡರಂತೆ ವರ್ತಿಸುತ್ತಿದ್ದರು. ಈ ಹಳ್ಳಿಯ ಶ್ರೀಮಂತ ಕುಟುಂಬಗಳಲ್ಲಿ ಶೌಚಾಲಯಗಳಿಲ್ಲ. ಹಾಗಿದ್ದಾಗ ನಮ್ಮಂತಹ ಬಡ ಕುಟುಂಬಕ್ಕೆ ಯಾಕದು? ಎಂದು ನನ್ನ ಪತಿ ನಾರಾಯಣ್ ನನ್ನ ಬಾಯಿ ಮುಚ್ಚಿಸುತ್ತಿದ್ದರು," ಎನ್ನುತ್ತಾರೆ ಸಂಗಿತಾ.
 
ಸಂಗೀತಾಳ ಹರೆಯದ ಮಗಳು ಸಹ ಅದೇ ಸಮಸ್ಯೆಯನ್ನು ಎದುರಿಸ ಬೇಕಾದಾಗ  ಶೌಚಾಲಯ ಕಟ್ಟಿಸುವ ಸಂಗೀತಾ ಸಂಕಲ್ಪ ಪ್ರಬಲವಾಯಿತು. " ಶೌಚಾಲಯ ನಿರ್ಮಿಸಲು ನಮ್ಮ ಬಳಿ ಹಣವಿರಲಿಲ್ಲ. ಆದ್ದರಿಂದ ನಾನು ನನ್ನಲಿದ್ದ ಚಿನ್ನಾಭರಣಗಳನ್ನು ಮಾರಿದೆ . ನನ್ನ ಕುಟುಂಬದ ಸದಸ್ಯರಲ್ಲಿ ಯಾರು ಕೂಡ ಇದನ್ನು ಬೆಂಬಲಿಸಲಿಲ್ಲ. ಆಭರಣಗಳಿಗೆ ಹೋಲಿಸಿದರೆ ಶೌಚಾಲಯ ಅತ್ಯಗತ್ಯ ಮೂಲಸೌಕರ್ಯ. ನಾನು ಶೌಚಾಲಯ ಕಟ್ಟಿಸುವಲ್ಲಿ ಯಶಸ್ವಿಯಾದೆ ಎನ್ನುವಾಗ ಸಂಗೀತಾರ ಕಣ್ಣಲ್ಲಿ  ಮಿನುಗುತ್ತದೆ ಸಾಧಿಸಿದ ಹೊಳಪು. 

ವೆಬ್ದುನಿಯಾವನ್ನು ಓದಿ