ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸುಶೀಲ್ ಶಿಂಧೆ?

ಭಾನುವಾರ, 22 ಜೂನ್ 2014 (14:23 IST)
ಚುನಾವಣೆಯಲ್ಲಿ ಸೋತಿರುವ ಕೇಂದ್ರ ಗೃಹ ಖಾತೆ ಮಾಜಿ ಸಚಿವ ಸುಶೀಲ್‌ಕುಮಾರ್ ಶಿಂದೆಯವರೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
 
ಮಹಾರಾಷ್ಟ್ರ ಮತ್ತು ಅಸ್ಸಾಂಗಳಲ್ಲಿ ನಾಯಕತ್ವ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಶನಿವಾರ ದಿನವಿಡೀ ಕಾಂಗ್ರೆಸ್ ವಲಯದಲ್ಲಿ ನಡೆದ ಬೆಳವಣಿಗೆಗಳು ಅದಕ್ಕೆ ಪುಷ್ಟಿ ನೀಡಿವೆ. ವಿಶೇಷವಾಗಿ ತಕ್ಷಣವೇ ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವೇ ಆಗಿದೆ.
 
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸೋನಿಯಾರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಜತೆಗೆ ಮಾತುಕತೆ ನಡೆಸಿದರು. ಇದಾದ ಬಳಿಕ ಮತ್ತೆ ಪೃಥ್ವಿರಾಜ್ ಅವರು ಸೋನಿಯಾರನ್ನು ಭೇಟಿ ಮಾಡಿದರು.
 
ಹೂಡ ಬಚಾವ್?: ಹರ್ಯಾಣದಲ್ಲಿ ಕಾಂಗ್ರೆಸ್ 4 ಸ್ಥಾನ ಪಡೆದುಕೊಂಡರೂ ಸಿಎಂ ಸ್ಥಾನದಿಂದ ಭೂಪಿಂದರ್ ಸಿಂಗ್ ಹೂಡ ಅವರನ್ನು ಬದಲಿಸದೇ ಇರಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
 
ಖರ್ಗೆ ಗುವಾಹಟಿಗೆ
 
ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಕೂಡ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಅಲ್ಲಿನ ಕಾಂಗ್ರೆಸ್ ಮುಖಂಡರ ಜತೆ ಚರ್ಚಿಸಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಿನ ವಾರ ಗುವಾಹಟಿಗೆ ವೀಕ್ಷಕರಾಗಿ ತೆರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ