ಸರ್ದಾರ್ ವಲ್ಲಭಬಾಯಿ ಪಟೇಲರಿಲ್ಲದೆ ಗಾಂಧಿ ಕೂಡ ಅಪೂರ್ಣ: ಮೋದಿ

ಶುಕ್ರವಾರ, 31 ಅಕ್ಟೋಬರ್ 2014 (12:20 IST)
"ಸರ್ದಾರ್ ವಲ್ಲಭಬಾಯಿ ಪಟೇಲರಿಲ್ಲದೆ ಗಾಂಧಿ ಕೂಡ ಅಪೂರ್ಣ, ರಾಷ್ಟ್ರಪಿತ ಆರಂಭಿಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಪಟೇಲ್ ಅವಿಭಾಜ್ಯ ಪಾತ್ರವನ್ನು ವಹಿಸಿದ್ದರು  ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ದೇಶದ ಪ್ರಥಮ ಗೃಹಮಂತ್ರಿ, ಉಕ್ಕಿನ ಮನುಷ್ಯ ಸರ್ದಾರ್ ಅವರ 139 ಜನ್ಮದಿನವನ್ನು ರಾಷ್ಟ್ರೀಯ ಏಕತಾದಿನವೆಂದು ಘೋಷಿಸಿ,  ಆ ನಿಮಿತ್ತ ಏಕತಾ ಓಟಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಗಾಂಧಿ ಮತ್ತು ಪಟೇಲರ ನಡುವೆ ಅವಿನಾಭಾವ ಸಂಬಂಧವಿತ್ತು. ವಿವೇಕಾನಂದರಿಲ್ಲದೇ ರಾಮಕೃಷ್ಣ ಪರಮಹಂಸರು ಅಪೂರ್ಣರೆನಿಸುತ್ತಾರೆ. ಅಂತೆಯೇ  ಪಟೇಲರಿಲ್ಲದೆ ಗಾಂಧಿ ಕೂಡ ಅಪೂರ್ಣ, ಅವರ ನಡುವಿನ ಸಂಬಂಧ ಅಚಲವಾಗಿತ್ತು . ಇಬ್ಬರು ನಾಯಕರ ಜೋಡಿ ಅದ್ಬುತವಾಗಿತ್ತು. ಈ ಅನನ್ಯ ಸಹಭಾಗಿತ್ವ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿತು " ಎಂದರು.
 
 "ಸ್ವಾತಂತ್ರ್ಯ ಹೋರಾಟದಲ್ಲಿ ರೈತರ ಏಕೀಕರಣದ ಮೂಲಕ ಸರ್ದಾರ್ ಪಟೇಲ್ ಮಹಾತ್ಮ ಗಾಂಧಿಯವರನ್ನು ಸೇರಿಕೊಂಡರು. ಅವರು  ದಂಡಿಯಲ್ಲಿ ಯಾತ್ರೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು " ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
 
ರಾಷ್ಟ್ರ ರಾಜಧಾನಿಯಲ್ಲಿ ಪಟೇಲ್ ಜನ್ಮದಿನದ ಪ್ರತೀಕವಾಗಿ ಆಯೋಜಿಸಲಾಗಿದ್ದ ಏಕತಾ ಓಟದಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ರಕ್ಷಣಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ , ಕ್ರಿಕೆಟರ್ ಗೌತಮ್ ಗಂಭೀರ್, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ