ಹುತಾತ್ಮ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಪತ್ನಿ ಮಲ್ಲಮ್ಮ ಸಾವು

ಶನಿವಾರ, 9 ಜುಲೈ 2016 (08:36 IST)
ಹುತಾತ್ಮ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಅವರ ಪತ್ನಿ ಮಲ್ಲಮ್ಮ(37) ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘಕಾಲದಿಂದ ಮೆದುಳು ಕಾನ್ಸರ್‌ನಿಂದ ಬಳಲುತ್ತಿದ್ದರು.

ಕಲಬುರ್ಗಿಯ ಸೂರ್ಯ ನಗರದಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
 
ಬೆಂಗಳೂರಿನ ಹೆಚ್‌‌ಸಿಜಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಅವರು ಕಳೆದ ಮೂರು ತಿಂಗಳ ಹಿಂದೆ ಅವರು ಡಿಸ್ಚಾರ್ಜ್‌ ಆಗಿ ಮನೆಯಲ್ಲಿ ಬೆಡ್‌ ರೆಸ್ಟ್‌ ಪಡೆದುಕೊಳ್ಳುತ್ತಿದ್ದರು. ಇಂದು  ಬೆಳಿಗ್ಗೆ 6 ಗಂಟೆ ಸುಮಾರಿಗೆ ಅವರನ್ನು ಎಬ್ಬಿಸಲು ಹೋದಾಗ ಸಾವನ್ನಪ್ಪಿರುವುದು ತಿಳಿದು ಬಂತು ಎಂದು ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ. 
 
ಸಬ್‌ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆ 2014ರ ಜನವರಿ 14ರಂದು ರೌಡಿ ಮುನ್ನಾ ಬಂಧನ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಬಲಿಯಾಗಿದ್ದರು. ಪತಿಯ ಸಾವಿನ ಬಳಿಕ ಮಲ್ಲಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕಿಯಾಗಿ  ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಸಾಯಿ ದರ್ಶನ ಮತ್ತು ಶಿವಾನಿ ಎಂಬ ಮಕ್ಕಳಿದ್ದಾರೆ.
 
ಆಳಂದಿ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಮಲ್ಲಿಕಾರ್ಜುನ್ ಬಂಡೆ ಅವರ ಸಮಾಧಿ ಪಕ್ಕದಲ್ಲಿ ವೀರಶೈವ ಆಚರಣೆಯಂತೆ ಅವರನ್ನು ಮಣ್ಣು ಮಾಡಲಾಗುವುದು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ