ಖರ್ಗೆಗೆ ಸಂಸದೀಯ ಪಕ್ಷದ ನಾಯಕ ಪಟ್ಟ ಸಾಧ್ಯತೆ

ಸೋಮವಾರ, 19 ಮೇ 2014 (14:27 IST)
ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನ ಒಲಿವ ಸಾಧ್ಯತೆ ಇದೆ.
 
ಇಂಥದೊಂದು ಚರ್ಚೆ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಮೂಡಲಾರಂಭಿಸಿದೆ. ಮಾತ್ರವಲ್ಲ ಖರ್ಗೆಯವರಿಗೆ ಈ ಸ್ಥಾನ ನೀಡುವುದರಿಂದ ಭವಿಷ್ಯದ ರಾಜಕೀಯ ಸಾಧ್ಯತೆಗಳು ಏನಾಗಬಹುದು ಎಂಬ ಬಗ್ಗೆ ಚಿಂತನೆಗಳು ನಡೆದಿವೆ.
 
ಲೋಕಸಭಾ ಚುನಾವಣೆಯಲ್ಲಿ ಗಂಭೀರವಾಗಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ಈಗ ಪ್ರತಿಪಕ್ಷದ ಸ್ಥಾನಮಾನವೂ ಲಭಿಸುತ್ತಿಲ್ಲ. ಆದಾಗಿಯೂ ಪ್ರಜಾಪ್ರಭುತ್ವ ನಿಯಮ ಪ್ರಕಾರ ಪ್ರತಿಯೊಂದು ಪಕ್ಷವೂ ತನ್ನ ಸಂಸದೀಯ ಪಕ್ಷದ ನಾಯಕನನ್ನು ನೇಮಕ ಮಾಡಲೇಬೇಕು. ಅಂಥ ಸಂದರ್ಭದಲ್ಲಿ ಕಾಂಗ್ರೆಸ್‌ನ ಆಯ್ಕೆ ಪಟ್ಟಿಯಲ್ಲಿ ಖರ್ಗೆ ಸೇರಿದಂತೆ ಮೂವರು ಮಾತ್ರ ಇದ್ದಾರೆ.
 
ಕಾಂಗ್ರೆಸ್ ಮೂಲಗಳ ಪ್ರಕಾರ ಸೋಲಿನ ನೈತಿಕತೆಯನ್ನು ಹೊತ್ತಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಕಡಿಮೆ. ಸೋಮವಾರ ದೆಹಲಿಯಲ್ಲಿ ನಡೆಯುವ ಪಕ್ಷದ ಸಭೆಯಲ್ಲಿ ರಾಹುಲ್ ಭವಿಷ್ಯ ಇನ್ನೂ ಸ್ಪಷ್ಟವಾಗುತ್ತದೆ. ಹೀಗಾಗಿ ಹಾಲಿ ಸಂಸದರ ಪೈಕಿ ಹಿರಿಯರಾದ ಮಾಜಿ ಸಚಿವ ಕಮಲ್ ನಾಥ್, ಕೇರಳದಿಂದ ಏಳು ಬಾರಿ ಲೋಕಸಭೆಗೆ ಆಯ್ಕೆಗೊಂಡಿರುವ ಹಿಂದುಳಿದ ವರ್ಗದ ಮುಲಪ್ಪಳ್ಳಿ ರಾಮಚಂದ್ರ ಹಾಗೂ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಹೆಸರೂ ಪ್ರಸ್ತಾಪವಾಗುತ್ತಿದೆ.
 
ಲೆಕ್ಕಾಚಾರ: ಖರ್ಗೆಯವರಿಗೆ ಈ ಮಹತ್ವದ ಜವಾಬ್ದಾರಿ ನೀಡಲು ಹೈಕಮಾಂಡ್ ಚಿಂತನೆ ನಡೆಸಿರುವುದರ ಹಿಂದೆಯೂ ಮುಂದಾಲೋಚನೆಯ ಲೆಕ್ಕಾಚಾರಗಳಿವೆ ಎಂಬುದು ಕಾಂಗ್ರೆಸ್‌ನ ಉನ್ನತ ಮೂಲಗಳ ಅಭಿಪ್ರಾಯ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತೆ ಪಕ್ಷದ ಪುನರೋತ್ಥಾನಗೊಳಿಸುವ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್‌ಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾಗುವ ಪ್ರಬಲ ದಲಿತ ನಾಯಕನ ಅಗತ್ಯವೂ ಇದೆ.
 
ಇದುವರೆಗೆ ಕಾಂಗ್ರೆಸ್‌ನ ದಲಿತ ಮುಖ ಎಂದೇ ಬಿಂಬಿಸಲ್ಪಟ್ಟಿರುವ ಮಾಜಿ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಚುನಾವಣೆಯಲ್ಲಿ ಸೋತು ನೆಲಕಚ್ಚಿದ್ದಾರೆ. ಹೀಗಾಗಿ ಖರ್ಗೆಯವರಿಗೆ ಈ ಸ್ಥಾನ ನೀಡುವ ಮೂಲಕ ಅವರನ್ನು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದಕ್ಕೆ ಪಕ್ಷ ಚಿಂತನೆ ನಡೆಸಿದೆ.
 
ನಿಷ್ಠೆ: ಖರ್ಗೆ ಅವರ ಅಖಂಡ ಹೈಕಮಾಂಡ್ ನಿಷ್ಠೆಯೂ ಈ ಸಂದರ್ಭದಲ್ಲಿ ಲೆಕ್ಕಕ್ಕೆ ಬರಲಿದೆ. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ತಪ್ಪಿದರೂ ಅವರು ವರಿಷ್ಠರ ವಿರುದ್ಧ ಧ್ವನಿ ಎತ್ತಿಲ್ಲ. ಜತೆಗೆ ಕೇಂದ್ರದಲ್ಲಿ ಕಾರ್ಮಿಕ ಮತ್ತು ರೇಲ್ವೆ ಇಲಾಖೆಯನ್ನು ಅವರು ನಿಭಾಯಿಸಿದ ರೀತಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸಂಸದೀಯ ಕಲಾಪ ಸಂದರ್ಭದಲೂ 'ತೂಕ' ಪ್ರದರ್ಶಿಸಿದ್ದಾರೆ. ನಿರರ್ಗಳ ಹಿಂದಿ ಹಾಗೂ ಸಂಭಾಳಿಸಬಲ್ಲ ಇಂಗ್ಲಿಷ್‌ನಿಂದಾಗಿ ಅವರು ಮುಲಪ್ಪಳ್ಳಿ ರಾಮಚಂದ್ರ ಅವರನ್ನು ಹಿಂದಿಕ್ಕಬಲ್ಲರು ಎಂಬ ಮಾತುಗಳು ಕೇಳಿ ಬರುತ್ತಿವೆ. ಆಗ ಕಮಲ್‌ನಾಥ್ ಮತ್ತು ಖರ್ಗೆ ಪೈಕಿ ಒಬ್ಬರನ್ನು ಆಯ್ಕೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದ್ದು, ಅಲ್ಲೂ ಸೋನಿಯಾ ಕೃಪೆಯೇ ಅಂತಿಮ.

ವೆಬ್ದುನಿಯಾವನ್ನು ಓದಿ