ಬಿಜೆಪಿ, ಸಿಪಿಐ, ಕಾಂಗ್ರೆಸ್ ಪಕ್ಷಗಳಿಗೆ ತಾಕತ್ತಿದ್ರೆ ನಮ್ಮನ್ನು ಸೋಲಿಸಲಿ: ಮಮತಾ ಬ್ಯಾನರ್ಜಿ

ಮಂಗಳವಾರ, 21 ಜುಲೈ 2015 (18:22 IST)
ಮುಂಬರುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸೆಣಸುತ್ತಿದ್ದು ತಾಕತ್ತಿದ್ರೆ ಸೋಲಿಸಿ ಎಂದು ಬಿಜೆಪಿ, ಸಿಪಿಐ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲ್ ಹಾಕಿದ್ದಾರೆ.
 
ನಮ್ಮ ವಿರುದ್ಧ ಹೋರಾಡಲು ಸಿದ್ದವಾದರೆ ಹೋರಾಡಿ ನಿಮ್ಮ ಸವಾಲ್‌ನ್ನು ಸ್ವೀಕರಿಸುತ್ತೇನೆ. ಇಲ್ಲವಾದಲ್ಲಿ ಲಿಪ್‌ಸ್ಟಿಕ್ ಹಚ್ಚಿಕೊಂಡು ವಿಶ್ರಾಂತಿ ಪಡೆಯಿರಿ ಎಂದು ಟಿಎಂಸಿ ಆಯೋಜಿಸಿದ ಹುತಾತ್ಮರ ಕಾರ್ಯಕ್ರಮಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  
 
ಬಿಜೆಪಿ, ಸಿಪಿಐ-ಎಂ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸಿದ್ಧಾಂತ ಮತ್ತು ನೈತಿಕತೆಯಿಲ್ಲ. ಪಶ್ಚಿಮ ಬಂಗಾಳದಲ್ಲಂತೂ ಅಪ್ರಸ್ತುತವಾಗಿವೆ. ನಮ್ಮ ವಿರುದ್ಧ ಆರೋಪಗಳನ್ನು ಮಾಡುವುದಷ್ಟೆ ಅವುಗಳ ಕೆಲಸ. ವಿಪಕ್ಷಗಳಿಗೆ ಬಂಗಾಳದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಗುಡುಗಿದ್ದಾರೆ.  
 
ನಮಗೆ ಸವಾಲ್ ಹಾಕಿದಷ್ಟು ನೀವು ಪಡೆಯುವ ಸೀಟುಗಳು ಕಡಿಮೆಯಾಗುತ್ತಾ ಹೋಗುತ್ತವೆ. ಕಾಂಗ್ರೆಸ್, ಸಿಪಿಐ-ಎಂ ಮತ್ತು ಬಿಜೆಪಿ ಒಂದಾಗಿ ಚುನಾವಣೆ ಕಣಕ್ಕೆ ಬರಲಿ. ನಾವು ಏಕಾಂಗಿಯಾಗಿ ಬರುತ್ತೇವೆ. ನಾವು ಯಾರಿಗೂ ತಲೆಬಾಗುವುದಿಲ್ಲ. ನಮಗೆ ಜನತೆಯ ಆಶೀರ್ವಾದ ಸಾಕು ಎಂದು ಹೇಳಿದ್ದಾರೆ. 
 
ಮುಂದಿನ ವರ್ಷದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಎಲ್ಲಾ ದಾಖಲೆಗಳನ್ನು ಮುರಿಯುವಂತಹ ಬೃಹತ್ ರ್ಯಾಲಿ ಆಯೋಜಿಸುತ್ತೇವೆ ಎಂದು ತಿಳಿಸಿದ್ದಾರೆ.
 
ಕಳೆದ 34 ವರ್ಷಗಳಿಂದ ಅಧಿಕಾರದಲ್ಲಿದ್ದ ಸಿಪಿಐ-ಎಂ ಪಕ್ಷ ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸಲಿಲ್ಲ. ಇದೀಗ ಸಿಪಿಐ ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಬಿಜೆಪಿ ಪಕ್ಷಕ್ಕೆ ತನ್ನನ್ನು ತಾನು ಮಾರಿಕೊಂಡಿದೆ. ಟಿಎಂಸಿ ಪಕ್ಷ ಬಿಜೆಪಿ, ಸಿಪಿಐ ಅಥವಾ ಕಾಂಗ್ರೆಸ್‌ ಪಕ್ಷಕ್ಕೆ ತಲೆಬಾಗುವುದಿಲ್ಲ ಎಂದರು.  
 
ನೈತಿಕತೆಯಿಲ್ಲದ, ಯಾವುದೇ ಸಿದ್ದಾಂತಗಳಿಲ್ಲದ ಬಿಜೆಪಿ ರಾಜ್ಯದಲ್ಲಿ ಕೋಮುವಾದದ ವಿಷ ಹರಡಿಸಲು ಪ್ರಯತ್ನಿಸುತ್ತಿದೆ. ಟಿಎಂಸಿ ಕಾರ್ಯಕರ್ತರು ಒಂದಾಗಿ ಎಲ್ಲಾ ಪಕ್ಷಗಳನ್ನು ಸೋಲಿಸಬೇಕು ಎಂದು ಪಶ್ಚಿಮ ಬಂಗಾಳಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ