ಕೌನ್ ಬನೇಗಾ ಕರೋಡ್‌ಪತಿ ಹೆಸರಿನಲ್ಲಿ ರೈತನಿಗೆ 1.7 ಕೋಟಿ ಪಂಗನಾಮ!

ಬುಧವಾರ, 31 ಡಿಸೆಂಬರ್ 2014 (18:11 IST)
ಪ್ರಸಿದ್ಧ ಟೆಲಿವಿಷನ್ ಗೇಮ್ ಶೋ ಕೌನ್ ಬನೇಗಾ ಕರೋಡ್‌ಪತಿ ಹೆಸರಿನಲ್ಲಿ ಬಡ ರೈತನಿಂದ ಬರೊಬ್ಬರಿ 1.7  ಕೋಟಿ ಹಣವನ್ನು ಲಪಟಾಯಿಸಿದ ಆರೋಪದ ಮೇಲೆ ಬಿಹಾರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 
ಸಿವಾನ್ ಜಿಲ್ಲೆಯ ಬಸಂತಪುರ್ ಎಂಬ ಹಳ್ಳಿಯ ಮೂಲದವನಾದ ಆರೋಪಿ ಶಂಭುನಾಥ್ ಗೋಕರ್ಣನಾಥ್ ಮಾಜಿಯನ್ನು ಡಿಸೆಂಬರ್ 27 ರಂದು ಪೊಲೀಸರು ಬಂಧಿಸಿದ್ದಾರೆ. ಜಂಬುಸಾರ್ ತಾಲ್ಲೂಕಿನ ಭುರ್ಚ್ ಗ್ರಾಮದ  ರತನ್ ಸಿಂಗ್ ರಾಜ್ ಎಂಬಾತನಿಂದ ಆರೋಪಿ 1.7  ಕೋಟಿ ಹಣವನ್ನು ಲಪಟಾಯಿಸಿದ್ದಾನೆಂದು ತಿಳಿದು ಬಂದಿದೆ. 
 
ರಾಜ್  ನೀಡಿರುವ ದೂರಿನ ಪ್ರಕಾರ  ನವೆಂಬರ್ 27 ರಂದು ಮಾಜಿಯಿಂದ ರಾಜ್‌ಗೆ ಪ್ರಥಮ ಫೋನ್ ಕರೆ ಬಂತು. ಕೆಬಿಸಿ ಕಡೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿದ ಆತ ನೀವು 35 ಕೋಟಿಯ ಲಾಟರಿಯನ್ನು ಗೆದ್ದಿರುವುದಾಗಿ ಹೇಳಿದ್ದಾನೆ. ಬಹುಮಾನದ ಮೊತ್ತವನ್ನು ಪಡೆಯಲು ತೆರಿಗೆ ಹಣವನ್ನು ಬ್ಯಾಂಕ್ ಖಾತೆಗೆ ಹಾಕಬೇಕಾಗಿ ಆತ ಹೇಳಿದ್ದಾನೆ. 
 
ತನಗೆ ಬಂದಿರುವ ಕರೆ ಸತ್ಯ ಎಂದು ಬಗೆದ ರಾಜ್, ಒಂದು ತಿಂಗಳು ಬಹಳ ಕಷ್ಟಪಟ್ಟು 1.7  ಕೋಟಿ ಹಣವನ್ನು ಸಂಗ್ರಹಿಸಿದ. ಇದಕ್ಕಾಗಿ ಆತ ತನ್ನ ಹೊಲವನ್ನು ಸಹ ಮಾರಿದ ಮತ್ತು ವಂಚಕ ಹೇಳಿದ ಖಾತೆಗೆ ಹಣವನ್ನು ವರ್ಗಾಯಿಸಿದ. 
 
ನಂತರ 35 ವರ್ಷದ ಆರೋಪಿ ಮಾಜಿಯಿಂದ ಯಾವುದೇ ಕರೆಗಳು ಬರಲಿಲ್ಲ.  ಕಂಗಾಲಾದ ರೈತ  ಮಾಜಿ ಕರೆ ಮಾಡಿದ ನಂಬರ್‌ಗೆ ತಾನು ಫೋನಾಯಿಸಿದ. ಆದರೆ ಅದು ಸ್ವಿಚ್ಡ್ ಆಫ್ ಆಗಿತ್ತು. 
 
ನಂತರ ಆತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ. ಕಳೆದ ಮೂರು ದಿನಗಳ ಹಿಂದೆ ಆರೋಪಿ ಹಣ ತೆಗೆದುಕೊಳ್ಳಲು ಬ್ಯಾಂಕ್‌ಗೆ ಹೋದಾಗ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ