ಪುತ್ರಿಗೆ ಮಧ್ಯಾಹ್ನದೂಟ ಯಾಕೆ ನೀಡಿಲ್ಲವೆಂದು ಕೇಳಿದ ತಂದೆಯನ್ನು ಹತ್ಯೆಗೈದ ಶಿಕ್ಷಕರು

ಶನಿವಾರ, 13 ಫೆಬ್ರವರಿ 2016 (17:06 IST)
ಶಾಲಾ ವಿದ್ಯಾರ್ಥಿನಿಯಾದ ಪುತ್ರಿಗೆ ಮಧ್ಯಾಹ್ನದೂಟ ನೀಡಲು ಶಾಲಾ ಸಿಬ್ಬಂದಿ ನಿರಾಕರಿಸಿರುವುದನ್ನು ಪ್ರಶ್ನಿಸಿದ ತಂದೆಯ ಮೇಲೆ ಶಾಲಾ ಶಿಕ್ಷಕರು ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.
 
ಗೋಖ್ಲಪುರ್ ಗ್ರಾಮದ ನಿವಾಸಿಯಾದ 50 ವರ್ಷ ವಯಸ್ಸಿನ ಮೊಹಮ್ಮದ್ ಸಗೀರ್, ಶಾಲಾ ವಿದ್ಯಾರ್ಥಿನಿಯಾದ ಪುತ್ರಿಗೆ ಯಾಕೆ ಮಧ್ಯಾಹ್ನದೂಟ ನೀಡಲು ನಿರಾಕರಿಸಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಪಡೆಯಲು ಶಿಕ್ಷಕರ ಭೇಟಿಗಾಗಿ ಶಾಲೆಗೆ ಬಂದಿದ್ದರು ಎನ್ನಲಾಗಿದೆ. 
 
ಶಾಲಾ ಶಿಕ್ಷಕರ ವರ್ತನೆ ಬಗ್ಗೆ ಹೆಡ್‌ಮಾಸ್ಟರ್ ಬಳಿ ದೂರುತ್ತಿದ್ದಂತೆ ಆಕ್ರೋಶಗೊಂಡ ಶಿಕ್ಷಕರು, ಸಗೀರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಸಗೀರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದರೂ ಗುರುವಾರದಂದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಆರಾರಿಯಾ ಜಿಲ್ಲೆಯಲ್ಲಿ 1918 ಶಾಲೆಗಳಲ್ಲಿ ಮಧ್ಯಾಹ್ನದೂಟ ನೀಡಲಾಗುತ್ತಿದ್ದು, ಸುಮಾರು 1 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 
ಹತ್ಯೆಯಾದ ಸಗೀರ್ ಪುತ್ರಿ ಕಾಶೀದಾ ಖಾನ್ 5ನೇ ತರಗತಿಯಲ್ಲಿ ಓದುತ್ತಿದ್ದು, ತಂದೆ  ಮಧ್ಯಾಹ್ನದೂಟ ನೀಡದಿರುವ ಬಗ್ಗೆ ಶಾಲಾ ಶಿಕ್ಷಕರನ್ನು ಪ್ರಶ್ನಿಸುತ್ತಿದ್ದಂತೆ ಅವರು ಹಲ್ಲೆ ನಡೆಸಿದರು ಎಂದು ತಿಳಿಸಿದ್ದಾಳೆ.
 
ಸಗೀರ್ ಪುತ್ರ ರಿಯಾಜ್ ಪ್ರಕಾರ, ಆರೋಪಿ ಶಿಕ್ಷಕರು ತಂದೆಯ ಖಾಸಗಿ ಭಾಗಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಿರುವುದು ಸಾವಿಗೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ