ಪನ್ನೀರ್‌ಗಾಗಿ ಪ್ರಾಣ ಬಿಟ್ಟ ಅಭಿಮಾನಿ

ಸೋಮವಾರ, 20 ಫೆಬ್ರವರಿ 2017 (07:04 IST)
ಚೆನ್ನೈನಲ್ಲಿ ಸಿನಿಮಾ ನಟರು ಮತ್ತು ರಾಜಕಾರಣಿಗಳೆಂದರೆ ಹುಚ್ಚು ಅಭಿಮಾನ. ಅವರಿಗಾಗಿ ಪ್ರಾಣ ಕೊಡಲು ಹಿಂದೇಟು ಹಾಕುವುದಿಲ್ಲ. ಮಾಜಿ ಸಿಎಂ ಜಯಲಲಿತಾ ಸಾವನ್ನಪ್ಪಿದಾಗ 500ಕ್ಕಿಂತ ಹೆಚ್ಚು ಜನರು ಆತ್ಮಹತ್ಯೆ, ಹೃದಯಾಘಾತದಿಂದ ದುರ್ಮರಣವನ್ನಿಪ್ಪಿದ್ದರು ಎನ್ನಲಾಗುತ್ತಿದೆ. ಮತ್ತೀಗ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಕ್ಕೆ ನೊಂದು ಅವರ ಅಭಿಮಾನಿಯೋರ್ವ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಂಚಿಪುರಮ್ ನಿವಾಸಿಯಾದ 37 ವರ್ಷದ ಮೂಸಾ ಮೃತ ವ್ಯಕ್ತಿಯಾಗಿದ್ದಾನೆ. ಬೆಂಕಿ ಹಚ್ಚಿಕೊಂಡು ಗಂಭೀರ ಸ್ಥಿತಿಯಲ್ಲಿ ಕಿಲ್‌ಪೌಕ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಆತ ಚಿಕಿತ್ಸೆಫಲಕಾರಿಯಾಗದೇ ಭಾನುವಾರ ಕೊನೆಯುಸಿರೆಳೆದಿದ್ದಾನೆ. ಮೃತ ಮೂಸಾ ಪತ್ನಿ ನಿಶಾ (35) ಮಕ್ಕಳಾದ ಬಾನು (15) ಮತ್ತು ಸೈಯ್ಯದ್(10) ಅವರನ್ನು ಅಗಲಿದ್ದಾನೆ. 
 
ಗುರುವಾರ ಮೂಸಾ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದ ಪನ್ನೀರ್ ಸೆಲ್ವಂ ಅವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಸಹಾಯಧನವನ್ನು ನೀಡಿದ್ದರು. ಜತೆಗೆ ಶೀಘ್ರವಾಗಿ ಗುಣಮುಖರಾಗಿರೆಂದು ಹಾರೈಸಿದ್ದರು.
 
ಮೃತ ಮೂಸಾ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಎಐಡಿಎಂಕೆ ಸದಸ್ಯನೂ ಆಗಿದ್ದ.
 
ಬುಧವಾರ ಸಂಜೆ ವಾನಿಗರ್ ವಿಧಿಲ್ಲಿ ಪನ್ನೀರ್ ಪರವಾಗಿ ಘೋಷಣೆ ಕೂಗಿದ ಆತ ಏಕಾಏಕಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ತಕ್ಷಣ ಆತನಿಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ ಸ್ಥಳೀಯರು ಅಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದರು.
 

ವೆಬ್ದುನಿಯಾವನ್ನು ಓದಿ