ದೆಹಲಿ: ಮತ್ತೊಬ್ಬ ಶಂಕಿತ ಐಸಿಸ್ ಉಗ್ರನ ಬಂಧನ

ಶುಕ್ರವಾರ, 5 ಫೆಬ್ರವರಿ 2016 (14:45 IST)
ಐಸಿಸ್ ಸಂಪರ್ಕ ಹೊಂದಿರುವ ಶಂಕೆಯಲ್ಲಿ 28 ವರ್ಷದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ.

ಶಂಕಿತನನ್ನು ಮುಂಬೈನ ಇಬ್ರಾಹಿಂ ಸಯ್ಯದ್ ಎಂದು ಗುರುತಿಸಲಾಗಿದ್ದು ದೆಹಲಿಯ ಕಾಶ್ಮೀರ ಗೇಟ್ ಐಎಸ್​ಬಿಟಿ ಪ್ರದೇಶದಲ್ಲಿ ಆತ ಸೆರೆಸಿಕ್ಕಿದ್ದಾನೆ. ಕೇಂದ್ರೀಯ ಗುಪ್ತಚರ ಸಂಸ್ಥೆ ನೀಡಿದ ಮಾಹಿತ ಮೇಲೆ ಆತನನ್ನು ಬಂಧಿಸಲಾಗಿದೆ.  ಮುಂಬೈ ಮಲಾಡ್ ಪಶ್ಚಿಮದ ನಿವಾಸಿಯಾಗಿದ್ದು ತನ್ನ ಸಹಚರನನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದ ಎಂದು ಪೊಲೀಸ್ ವಿಶೇಷ ಆಯುಕ್ತ ಅರವಿಂದ್ ದೀಪ್ ಹೇಳಿದ್ದಾರೆ.
 
ಭಯೋತ್ಪಾದಕ ಸಂಘಟನೆಗೆ ಹಣಕಾಸು ನೆರವು ನೀಡುತ್ತಿದ್ದನೆನ್ನಲಾದ ಕಟ್ಟಾ ಮೂಲಭೂತವಾದಿ ಸಯೀದ್​ ಎಂಬಾತನನ್ನು ಕಳೆದ ತಿಂಗಳು ಹರಿದ್ವಾರದಲ್ಲಿ ಬಂಧಿಸಲಾಗಿತ್ತು. ಆತನಿಂದ ತಲಾ 50,000 ರೂಪಾಯಿ ಪಡೆದಿದ್ದರೆನ್ನಲಾದ ನಾಲ್ವರನ್ನೂ ಸಹ ಅಲ್ಲಿಂದಲೇ ಬಂಧಿಸಲಾಗಿತ್ತು. ಅವರೆಲ್ಲರಿಗೂ ಹಿಂದಿನ ಮುಜಾಹಿದೀನ್ ಉಗ್ರಗಾಮಿ ಜೊತೆಗೆ ಸಂಪರ್ಕವಿತ್ತು ಎಂದು ಹೇಳಲಾಗುತ್ತಿದೆ. ಈ ಉಗ್ರಗಾಮಿ ಈಗ ಐಸಿಸ್​ಗೆ ಸೇರ್ಪಡೆಯಾಗಿದ್ದಾನೆ.
 
ಇಂದು ಬಂಧಿಸಲ್ಪಟ್ಟ ಸಯ್ಯದ್ ಈ ಹಿಂದೆ ಬಂಧಿಸಲ್ಪಟ್ಟ ನಾಲ್ವರಲ್ಲಿ ಒಬ್ಬನಾಗಿರುವ ಅಕ್ಲಾಕ್ ಜತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 
 
ಪೊಲೀಸರೀಗ ಆತನ ಹಿನ್ನೆಲೆ ಕುರಿತು ತನಿಖೆ ನಡೆಸುತ್ತಿದ್ದಾರೆ ವಿಶೇಷ ತನಿಖಾ ದಳ ಆತನಿಗೆ ಇರುವ ಸಂಪರ್ಕಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ