ಮುಸ್ಲಿಂ ಎನ್ನುವ ಕಾರಣಕ್ಕೆ ಉದ್ಯೋಗ ನೀಡಲು ನಿರಾಕರಿಸಿದ ಗುಜರಾತ್ ಕಂಪೆನಿ

ಗುರುವಾರ, 21 ಮೇ 2015 (17:39 IST)
ವಜ್ರ ರಫ್ತು ಮಾಡುವ ಪ್ರಖ್ಯಾತ ಕಂಪೆನಿಯೊಂದು, ಎಂಬಿಎ ಪದವೀಧರನೊಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ಉದ್ಯೋಗ ನೀಡಲು ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಒಂದು ವೇಳೆ ಈ ವಿಷಯದಲ್ಲಿ ಸತ್ಯಾಂಶವಿದ್ದಲ್ಲಿ ತನಿಖೆಯನ್ನು ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ ಮೇ 19 ರಂದು ಎಂಬಿಎ ಪದವೀಧರನಾದ ಜೇಶನ್ ಅಲಿ ಖಾನ್ ಉದ್ಯೋಗಕ್ಕಾಗಿ ವಜ್ರಗಳನ್ನು ರಫ್ತು ಮಾಡುವ ಕಂಪೆನಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು.  
 
ಆದರೆ, ಉದ್ಯೋಗವಿರುವುದು ಮುಸ್ಲಿಮರಿಗಾಗಿ ಅಲ್ಲ ಎಂದು ಕಂಪೆನಿ ಮಾರುತ್ತರ ನೀಡಿತು ಎಂದು ಖಾನ್ , ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
 
ನೀವು ಕಂಪೆನಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವುದಕ್ಕೆ ಧನ್ಯವಾದಗಳು. ಆದರೆ, ಮುಸ್ಲಿಮರನ್ನು ಹೊರತುಪಡಿಸಿ ಇತರ ಸಮುದಾಯದವರಿಗೆ ಉದ್ಯೋಗ ಮೀಸಲಾಗಿದೆ ಎಂದು ಹರೇ ಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಉತ್ತರ ನೀಡಿದೆ ಎಂದು ಖಾನ್ ತಿಳಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ದೇಶಗಳಿಗೆ ಭೇಟಿ ನೀಡಿ ಮೇಕ್ ಇನ್ ಇಂಡಿಯಾ ಉದ್ದೇಶಕ್ಕಾಗಿ ಹೂಡಿಕೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿಯೇ ಧರ್ಮದ ಆದಾರದ ಮೇಲೆ ಉದ್ಯೋಗ ನಿರಾಕರಿಸುತ್ತಿರುವುದು ವಿಷಾದಕರ ಸಂಗತಿ ಎಂದು ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಜಿಶೇನ್ ಅಲಿ ಖಾನ್ ಈ ವಿಷಯವನ್ನು ಫೇಸ್‌ಬುಕ್‌‌ನಲ್ಲಿ ಪೋಸ್ಟ್ ಮಾಡಿದ ನಂತರ ತೀವ್ರ ಪ್ರತಿಕ್ರಿಯೆಗಳಿಂದ ಆಘಾತಗೊಂಡ ಕಂಪೆನಿ, ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ವೈಯಕ್ತಿಕ ಕಾರಣದಿಂದ ಎಚ್‌ಆರ್ ತಂಡ ಹಾಗೇ ಮಾಡಿರಬಹುದು ಎಂದು ಹೇಳಿ ಕೈತೊಳೆದುಕೊಂಡಿದೆ.
 
ಖಾನ್ ಆರೋಪಗಳನ್ನು ತಳ್ಳಿ ಹಾಕಿದ ಕಂಪೆನಿ ನಮ್ಮ ಕಂಪೆನಿಯಲ್ಲಿ 61 ಜನ ಮುಸ್ಲಿಮರು ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹರೇ ಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಸ್ಪಷ್ಟಪಡಿಸಿದೆ.  
 

ವೆಬ್ದುನಿಯಾವನ್ನು ಓದಿ