ಮಾಂಜಿ ಚುನಾವಣೆ ಭರವಸೆಯಿಂದ ಆಕ್ರೋಶಗೊಂಡ ಮೇಲ್ಜಾತಿ ಸಮುದಾಯ

ಸೋಮವಾರ, 5 ಅಕ್ಟೋಬರ್ 2015 (20:23 IST)
ಒಂದು ವೇಳೆ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸುವುದಾಗಿ ಹಿಂದು ಅವಾಮ್ ಮೋರ್ಚಾ ನೀಡಿದ ಹೇಳಿಕೆಯಿಂದ ಬಿಜೆಪಿಯ ಸಾಂಪ್ರದಾಯಕ ಮತದಾರರಾದ ಮೇಲ್ಜಾತಿ ವರ್ಗದವರಲ್ಲಿ ಆಕ್ರೋಶ ಮೂಡಿಸಿದೆ.
 
ದಲಿತರು ಮತ್ತು ಹಿಂದುಳಿದ ವರ್ಗದವರು ಸೇರಿದಂತೆ ಮೇಲ್ಜಾತಿಯ ಮತಗಳ ಮೇಲೆ ಕಣ್ಣಿಟ್ಟಿರುವ ಹಿಂದುಸ್ತಾನ್ ಅವಾಮ್ ಮೋರ್ಚಾ ಪಕ್ಷದ ಚುನಾವಣೆ ಭರವಸೆಗಳು ಬಿಜೆಪಿ ಮೈತ್ರಿಕೂಟಕ್ಕೆ ಮಾರಕವಾಗಿ ಪರಿಣಣಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿ ಪರಿಷ್ಕರಣೆ ಕುರಿತಂತೆ ನೀಡಿದ ಹೇಳಿಕೆಯಿಂದ ಕಂಗಾಲಾಗಿರುವ ಬಿಜೆಪಿ ನಾಯಕರು, ದಲಿತರು, ಒಬಿಸಿ, ಇಬಿಸಿ ಸೇರಿದಂತೆ ಹಿಂದುಳಿದ ವರ್ಗಗಳ ಮನವೊಲಿಸಲು ಹರಸಾಹಸ ಪಡುತ್ತಿರುವಂತೆಯೇ ಹಿಂದುಸ್ತಾನ್ ಅವಾಮ್ ಮೋರ್ಚಾ ಹೇಳಿಕೆ ಮತ್ತಷ್ಟು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.  
 
ಹಿಂದುಸ್ತಾನ್ ಅವಾಮ್ ಮೋರ್ಚಾ ಪಕ್ಷದ ಮುಖ್ಯಸ್ಥ ಜಿತನ್ ರಾಮ್ ಮಾಂಜಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂದು ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು. ಖಾಸಗಿ ಕ್ಷೇತ್ರದಲ್ಲಿ ಮೇಲ್ಜಾತಿಯವರ ಉದ್ಯೋಗಗಳನ್ನು ಕಸಿದುಕೊಳ್ಳುವ ಮೈತ್ರಿಕೂಟಕ್ಕೆ ಯಾವ ರೀತಿ ಬೆಂಬಲ ಸೂಚಿಸಬೇಕು ಎಂದು ರಾಜ್‌ಪೂತ್ ಸಮುದಾಯದ ರಾಹುಲ್ ಕುಮಾರ್ ಸಿಂಗ್ ಪ್ರಶ್ನಿಸಿದ್ದಾರೆ. 
 
ರಾಜ್‌ಪೂತ್ ಸಮುದಾಯದ ರಾಹುಲ್ ಕುಮಾರ್ ಸಿಂಗ್ ಮಾಸ್ಟರ್ ಪದವಿ ಪಡೆದ ಪದವೀಧರನಾಗಿದ್ದು ಸರಕಾರಿ ಉದ್ಯೋಗದ ಪರೀಕ್ಷೆಗಾಗಿ ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
 

ವೆಬ್ದುನಿಯಾವನ್ನು ಓದಿ