ವಿವಾಹಿತ ಮಹಿಳೆ ಪತಿಯ ಮನೆಗಿಂತ ರಸ್ತೆಯಲ್ಲೇ ಹೆಚ್ಚು ಸುರಕ್ಷಿತಳು: ಹೈಕೋರ್ಟ್

ಮಂಗಳವಾರ, 30 ಸೆಪ್ಟಂಬರ್ 2014 (16:28 IST)
"ಭಾರತದಲ್ಲಿ ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಮನೆಗಳಿಗಿಂತ, ಬೀದಿಯಲ್ಲಿಯೇ ಹೆಚ್ಚು ಸುರಕ್ಷಿತರು " ಎಂದು ತೀರ್ಮಾನಿಸಿರುವ ದೆಹಲಿ ಹೈಕೋರ್ಟ್ 2011 ರಲ್ಲಿ ಪತ್ನಿಯನ್ನು ಕೊಂದಿದ್ದ ವ್ಯಕ್ತಿಯೊಬ್ಬನಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು.

ಪ್ರಕರಣವನ್ನು ಅವಲೋಕಿಸಿದ ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಾಜೋಗ್ ಮತ್ತು ಮುಕ್ತಾ ಗುಪ್ತಾ ಪೀಠ, ಘಟನೆ ನಡೆದ ಸ್ಥಳದಿಂದ ಆರೋಪಿ ಪ್ರದೀಪ್ ಪರಾರಿಯಾಗಿರುವುದು, ಆತ ತಪ್ಪಿತಸ್ಥ ಎಂದು ತೋರಿಸುವ ಪ್ರಮುಖ ಪುರಾವೆ ಎಂದು ಪರಿಗಣಿಸಿ, ಆತ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು. 
 
ಇಲ್ಲಿಯವರೆಗೂ ನಾವು ಕಂಡಂತೆ, ಪ್ರತಿ ಹತ್ತು ಕೊಲೆ ಅಪರಾಧಗಳಲ್ಲಿ ಆರೋಪಿಯ ಸ್ಥಾನದಲ್ಲಿ ಪತಿ ಇರುತ್ತಾನೆ,  ಪೀಡಿತಳ ಸ್ಥಾನದಲ್ಲಿ ಪತ್ನಿ ಇರುತ್ತಾಳೆ ಮತ್ತು ಅಪರಾಧದ ಸ್ಥಳ ವೈವಾಹಿಕ ಮನೆಯಾಗಿರುತ್ತದೆ. 10 ಅಪರಾಧಗಳಲ್ಲಿ ಉಳಿದ 9 ಅಪರಾಧಗಳು ಮನೆಹೊರಗೆ ದಾಖಲಾಗುತ್ತವೆ. ಅಲ್ಲಿ ಪೀಡಿತ ಪುರುಷನಾಗಿರುತ್ತಾನೆ.  ವಿವಾಹಿತ ಮಹಿಳೆ ಗಂಡನ ಮನೆಗಿಂತ ರಸ್ತೆಗಳಲ್ಲಿ ಹೆಚ್ಚು ಸುರಕ್ಷಿತಳು ಎಂಬುದು ಈ ಮೂಲಕ ಸಾಬೀತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು. 
 
ಆರೋಪಿ ಪ್ರದೀಪ್ ತನ್ನನ್ನು ಅಪರಾಧಿ ಎಂದು ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಘಟನೆ ನಡೆದಾಗ ಆ ಸ್ಥಳದಲ್ಲಿ ತಾನಿರಲಿಲ್ಲ. ನಿರಪರಾಧಿಯಾದ ತನ್ನನ್ನು ಈ ಪ್ರಕರಣದಲ್ಲಿ ವೃಥಾ ಸಿಲುಕಿಸಲಾಗಿದೆ ಎಂದು ಆತ ವಾದಿಸಿದ್ದ. 

ವೆಬ್ದುನಿಯಾವನ್ನು ಓದಿ