ಸಂಸದೆ ಹೇಮಾಮಾಲಿನಿ ಕಾಣೆಯಾಗಿದ್ದಾಳೆ ಎಂದು ಪೋಷ್ಟರ್ ಅಂಟಿಸಿದ ಮಥುರಾ ನಿವಾಸಿಗಳು

ಸೋಮವಾರ, 21 ಜುಲೈ 2014 (18:57 IST)
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕ್ಷೇತ್ರದ ಕಡೆ ಮುಖ ಹಾಕದ  ಸಂಸದೆ ಹೇಮಾಮಾಲಿನಿಯ ಬಗ್ಗೆ  ಬೇಸರ ವ್ಯಕ್ತ ಪಡಿಸಿರುವ ಮಥುರಾ ನಿವಾಸಿಗಳು ಹೇಮಾಮಾಲಿನಿ ಕಾಣೆಯಾಗಿದ್ದಾರೆ ಎಂಬ ಪೋಷ್ಟರ್ ಅಂಟಿಸುವುದರ ಮೂಲಕ ತಮ್ಮಅಸಮಾಧಾನವನ್ನು ಪ್ರಕಟಿಸಿದ್ದಾರೆ. 

ಅಲ್ಲದೇ ಆಕೆಯ ಬೊಂಬೆಯನ್ನು ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಸುಡುವುದರ ಮೂಲಕ ಅವರು ತಮ್ಮ ಕೋಪವನ್ನು ತೋರ್ಪಡಿಸಿದ್ದಾರೆ. 
 
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ವಿಜಯದ ಮಾಲೆ ತೊಟ್ಟಿದ್ದ ಕನಸಿನ ಕನ್ಯೆ  ಈ ಎರಡು ತಿಂಗಳಲ್ಲಿ ಕೇವಲ ಒಂದು ಬಾರಿ ಮಾತ್ರ  ಅಲ್ಲಿಗೆ ಭೇಟಿ ನೀಡಿದ್ದಾರೆ.  ಜೂನ್ ಎರಡನೇ ವಾರದಲ್ಲಿ ಕೇವಲ ಒಂದು ದಿನ ಅವರು ಮಥುರಾಕ್ಕೆ ಬಂದು ಹೋಗಿದ್ದು, ತದನಂತರ ಅವರು ಆ ಕಡೆ ಸುಳಿದೇ ಇಲ್ಲ ಎಂದು ವರದಿಯಾಗಿದೆ. 
 
ಆಕೆಯಲ್ಲಿ ಜನರ ಸೇವೆ ಮಾಡಬೇಕೆಂಬ ಬಯಕೆ ಇರಲಿಲ್ಲ. ಕೇವಲ ಅಧಿಕಾರವನ್ನು ಅನುಭವಿಸಬೇಕೆಂದು ಅವರು ಲೋಕಸಭೆಯಲ್ಲಿ ಸ್ಪರ್ಧಿಸಿದ್ದಾರೆ ಎಂಬುದನ್ನು ಅವರ ಗೈರು ಹಾಜರಿ  ಸ್ಪಷ್ಟೀಕರಿಸುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಅವರಿಗೆ ಮತ ನೀಡಿದ ಲೇಬರ್ ಟ್ರೇಡ್ ಯೂನಿಯನ್ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ಥಳೀಯರು  ತಮಗೆ ದ್ರೋಹವಾಗಿದೆ ಎಂದು ಭಾವಿಸಿದ್ದಾರೆ. ಸರಕಾರ ವಿರೋಧಿ ಘೋಷಣೆಗಳನ್ನು ಕೂಗುತ್ತ ಹೇಮಾಮಾಲಿನಿ ಅವರ 'ಅಂತ್ಯಕ್ರಿಯೆ ಮೆರವಣಿಗೆ' ಯನ್ನು  ಮಾಡುವುದರ ಮೂಲಕ ಅವರು ತಮ್ಮ ಕ್ರೋಧವನ್ನು ಹೊರ ಹಾಕಿದ್ದಾರೆ. 
 
ಬಾಲಿವುಡ್ ಸ್ಟಾರ್ ನಟಿಯನ್ನು ನಮ್ಮ ಕ್ಷೇತ್ರದ ಸಂಸದಳನ್ನಾಗಿ ಆಯ್ಕೆ ಮಾಡುವುದು ವ್ಯರ್ಥ ಎಂದು ಪ್ರತಿಯೊಬ್ಬರೂ ನಮಗೆ ಎಚ್ಚರಿಕೆ ನೀಡಿದ್ದರು. ಆದರೆ ಮಥುರಾದ ಜನರು ಆಕೆಯಲ್ಲಿ ನಂಬಿಕೆ ಇಟ್ಟರು. ಅಮೇಥಿಯಲ್ಲಿ ಸೋತ  ಸ್ಮತಿ ಇರಾನಿ ಆಕೆಗಿಂತ ಎಷ್ಟೋ ಪಟ್ಟು ವಾಸಿ. ಅತಿ ದೊಡ್ಡ ಮಂತ್ರಿ ಪದವಿಯನ್ನು ಪಡೆದರು ಕೂಡ ಅವರು ತಿಂಗಳಿಗೆ ಒಮ್ಮೆಯಾದರೂ ಅಮೇಥಿಗೆ ಭೇಟಿ ನೀಡುತ್ತಾರೆ ಎಂದು ಲೇಬರ್ ಟ್ರೇಡ್ ಯೂನಿಯನ್ ಅಧ್ಯಕ್ಷ  ತಾರಾಚಂದ್ ಗೋಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ