ಮೇಲ್ಜಾತಿಯ ಬಡವರಿಗೆ ಪ್ರತ್ಯೇಕ ಮೀಸಲಾತಿ ಕೋಟಾ: ಮಾಯಾವತಿ ಒತ್ತಾಯ

ಸೋಮವಾರ, 30 ನವೆಂಬರ್ 2015 (20:59 IST)
ಕ್ರಿಶ್ಚಿಯನ್, ಸಿಖ್ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಲು ಮತಾಂತರಗೊಂಡ ಎಸ್‌ಸಿ.ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೂ ಕೇಂದ್ರ ಸರಕಾರ ಮೀಸಲಾತಿ ಘೋಷಿಸಬೇಕು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್‌ಪಿ ಮುಖ್ಯಸ್ಥ ಮಾಯಾವತಿ ಒತ್ತಾಯಿಸಿದ್ದಾರೆ.
 
ಮತಾಂತರಗೊಂಡ ನಂತರವು ಎಸ್‌ಸಿ.ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯಾಗಿಲ್ಲವಾದ್ದರಿಂದ ಅವರಿಗೆ ಮೀಸಲಾತಿ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಮೇಲ್ಜಾತಿಯ ಬಡವರಿಗಾಗಿ ಮೀಸಲಾತಿಯ ಪ್ರತ್ಯೇಕ ಕೋಟಾ ಮತ್ತು ಮುಸ್ಲಿಂ, ಕ್ರಿಶ್ಚಿಯನ್, ಬುಡಕಟ್ಟು ಮತ್ತು ಒಬಿಸಿ ಸಮುದಾಯಗಳು ಕೂಡಾ ಮೀಸಲಾತಿಗೆ ಅರ್ಹವಾಗಿವೆ. ಒಂದು ವೇಳೆ,  ಎಸ್‌ಸಿ.ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗಿರುವ ಮೀಸಲಾತಿ ಬದಲಿಸುವ ಪ್ರಯತ್ನ ಮಾಡಿದಲ್ಲಿ ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಗುಡುಗಿದ್ದಾರೆ.
 
ರಾಜ್ಯಸಭೆಯಲ್ಲಿ ಸಂವಿಧಾನಕ್ಕೆ ಬದ್ಧ ಎನ್ನುವ ಚರ್ಚೆಯಲ್ಲಿ ಪಾಲ್ಗೊಂಡ ಮಾಯಾವತಿ,ದಲಿತರು ಮತ್ತು ಬುಡಕಟ್ಟು ಸಮುದಾಯಗಳಿಗೆ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲೂ ಬಡ್ತಿಯಲ್ಲಿ ಮೀಸಲಾತಿ ದೊರೆಯಬೇಕು ಎಂದು ಒತ್ತಾಯಿಸಿದರು.
 
ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಮೇಲ್ಜಾತಿಯಲ್ಲಿರುವ ಬಡವರಿಗೆ ಪ್ರತ್ಯೇಕ ಮೀಸಲಾತಿ ಕೋಟಾ ಘೋಷಿಸಬೇಕು. ಆದರೆ, ಪ್ರದಾನಿ ಮೋದಿ ಇಲ್ಲಿಯವರೆಗೆ ಅಂತಹ ಘೋಷಣೆ ಮಾಡದಿರುವುದು ವಿಷಾದಕರ ಸಂಗತಿ ಎಂದರು. 

ವೆಬ್ದುನಿಯಾವನ್ನು ಓದಿ