ಪ್ರಧಾನಿ ಮೋದಿ ಸರಕಾರ ದಲಿತ ವಿರೋಧಿ ಸರಕಾರ:ಮಾಯಾವತಿ

ಗುರುವಾರ, 28 ಜನವರಿ 2016 (16:54 IST)
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ದಲಿತ ವಿರೋಧಿ ಸರಕಾರವಾಗಿದ್ದು, ದಲಿತ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲಾ ಕುರಿತಂತೆ ಪ್ರಧಾನಿ ಮೋದಿಯವರ ಭಾವನಾತ್ಮಕ ಪ್ರತಿಕ್ರಿಯೆ ನಕಲಿಯಾಗಿದೆ ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ. 
 
ಮೋದಿ ಸರಕಾರದಲ್ಲಿ ಬಹುತೇಕ ಸಚಿವರು ದಲಿತ ವಿರೋಧಿಯಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರು ಮತ್ತು ಮುಸ್ಲಿಮರ ಮೇಲಿನ ಕಿರುಕುಳ ಪ್ರಕರಣಗಳಲ್ಲಿ ಹೆಚ್ಚಳವಾಗಿವೆ ಎಂದು ಆರೋಪಿಸಿದರು.
 
ಕಾಂಗ್ರೆಸ್ ಪಕ್ಷದಂತೆ ಬಿಜೆಪಿ ಪಕ್ಷವು ದಲಿತ ವಿರೋಧಿ ಮಾನಸಿಕತೆಯನ್ನು ಹೊಂದಿದೆ. ಕೇಂದ್ರ ಸಚಿವ ವಿ.ಕೆ.ಸಿಂಗ್, ದಲಿತರನ್ನು ನಾಯಿಗಳು ಎಂದು ಜರಿದಿದ್ದರೂ ಮೋದಿ ಸರಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಲಕ್ನೋಗೆ ಬಂದು ರೆಹಿತ್ ವೆಮುಲಾ ಆತ್ಮಹತ್ಯೆ ಕುರಿತಂತೆ ಭಾವನಾತ್ಮಕ ಪ್ರತಿಕ್ರಿಯೆ ನೀಡಿರುವುದು ಕೇವಲ ರಾಜಕೀಯ ಪ್ರೇರಿತವಾಗಿದೆ. ಮೋದಿಜೀ ಒಂದು ಕಡೆ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ. ಮತ್ತೊಂದೆಡೆ ದಲಿತ ವಿದ್ಯಾರ್ಥಿಗಳನ್ನು ಅಪಮಾನಿಸಲಾಗುತ್ತದೆ ಎಂದು ಗುಡುಗಿದರು.
 
ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ದರ್ಜೆ ನೀಡಬೇಕಾಗಿದೆ. ಮುಂಬರುವ 2017ರಲ್ಲಿ ಇದನ್ನು ಚುನಾವಣೆ ವಿಷಯವಾಗಿ ಎತ್ತಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ