ನನ್ನ ಸರಕಾರವಿದ್ರೆ ಬಿಜೆಪಿ ಕೇಂದ್ರ ಸಚಿವನನ್ನು ಜೈಲಿಗೆ ಅಟ್ಟುತ್ತಿದ್ದೆ: ಮಾಯಾವತಿ

ಗುರುವಾರ, 3 ಮಾರ್ಚ್ 2016 (16:18 IST)
ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚುತ್ತಿರುವ ದ್ವೇಷ ಭಾಷಣಗಳು ದೇಶದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಸಂದರ್ಭದಲ್ಲಿಯೇ ಮಾಜಿ ಮುಖ್ಯಮಂತ್ರಿ ಮಾಯಾವತಿ, ದ್ವೇಷ ಭಾಷಣ ಮಾಡಿದ ಕೇಂದ್ರ ಮಾನವ ಜಲ ಸಂಪನ್ಮೂಲ ಖಾತೆಯ ರಾಜ್ಯ ಸಚಿವ ರಾಮ್ ಶಂಕರ್ ಕಟಾರಿಯಾ ವಿರುದ್ಧ, ಸಿಎಂ ಅಖಿಲೇಶ್ ಯಾದವ್ ಸರಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಗುಡುಗಿದ್ದಾರೆ.
 
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸರಕಾರದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಹಲವಾರು ಬಾರಿ ದ್ವೇಷ ಭಾಷಣಗಳನ್ನು ಮಾಡುತ್ತಾ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದಾರೆ. ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಮಾಜವಾದಿ ಪಕ್ಷದ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಆಗ್ರಾದಲ್ಲಿ ನಡೆದಿರುವ ಘಟನೆ ಮೊದಲನೆಯದಲ್ಲ. ಸಂವಿಧಾನದ ರೀತಿಯಲ್ಲಿ ನಡೆಯುವುದಾಗಿ ಪ್ರಮಾಣ ವಚನ ಸ್ವೀಕರಿಸುವ ನಾಯಕರು, ಸಂವಿಧಾನ ವಿರೋಧಿ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ನಾಯಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
 
ದ್ವೇಷ ಭಾಷಣ ಮಾಡುತ್ತಿರುವ ನಾಯಕರು ಮತ್ತು ಸಚಿವರನ್ನು ಬಿಜೆಪಿ ಹೈಕಮಾಂಡ್ ಪಕ್ಷದಿಂದ ಕಿತ್ತೊಗೆಯಬೇಕು ಎಂದು ಕೋರಿದರು.
 
ಕೇಂದ್ರ ಸಚಿವ ಕಠಾರಿಯಾ ಮತ್ತು ಅವರ ಗೆಳೆಯರ ದ್ವೇಷ ಭಾಷಣನ್ನು ತೀವ್ರವಾಗಿ ವಿರೋಧಿಸುತ್ತೇವೆ. ಸಮಾಜವಾದಿ ಪಕ್ಷದ ಸರಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ, ನಮ್ಮ ಸರಕಾರ ಅಧಿಕಾರದಲ್ಲಿದ್ದರೆ ಅವರನ್ನು ಜೈಲಿಗೆ ಕಳುಹಿಸುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ