ಚಿತ್ತೂರು ಮೇಯರ್ ದಾರುಣ ಹತ್ಯೆ: ಆರೋಪಿಗಳು ಕರ್ನಾಟಕ ಮೂಲದವರೆಂಬ ಶಂಕೆ

ಮಂಗಳವಾರ, 17 ನವೆಂಬರ್ 2015 (13:30 IST)
ನೆರೆಯ ಆಂಧ್ರದ ಚಿತ್ತೂರು ನಗರದ ಮೇಯರ್ ಕಠಾರಿ ಅನುರಾಧ ಅವರನ್ನು ಅನಾಮಧೇಯ ವ್ಯಕ್ತಿಗಳು ಗುಂಡಿಕ್ಕಿ ಕೊಲೆಗೈದಿದ್ದಾರೆ.

ಮಂಗಳವಾರ ಬೆಳಿಗ್ಗೆ ಅನುರಾಧಾ ಕಚೇರಿಯ ತಮ್ಮ ಕೊಠಡಿಯಿಂದ ಪತಿ ಮೋಹನ್ ಜತೆ ಹೊರಬರುತ್ತಿದ್ದ ವೇಳೆ  ಬುರ್ಖಾ ಧರಿಸಿದ ನಾಲ್ವರ ಗುಂಪೊಂದು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದೆ. ನಂತರ ಗುಂಡಿನ ದಾಳಿ ನಡೆಸಿದ ಗುಂಪು ಸ್ಥಳದಿಂದ ಪರಾರಿಯಾಗಿದೆ. 
 
ರಕ್ತಸಿಕ್ತರಾಗಿ ಬಿದ್ದಿದ್ದ ದಂಪತಿಯನ್ನು ಮೋಹನ್ ಭದ್ರತಾ ಪಡೆಗಳು ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಆದರೆ ಆದರೆ ಮೇಯರ್ ಅನುರಾಧ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.  
 
ಅನುರಾಧ ಪತಿ ಮೋಹನ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು  ತಮಿಳುನಾಡಿನ ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ದುಷ್ಕರ್ಮಿಗಳು ಕರ್ನಾಟಕ ಮೂಲದವರು ಎನ್ನಲಾಗುತ್ತಿದ್ದು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಸುಫಾರಿ ನೀಡಿ ಈ ಕೃತ್ಯ ನಡೆಸಿರಬಹುದೆಂದು ಹೇಳಲಾಗುತ್ತಿದೆ. ಈ ಹಿಂದೆಯೂ ಮೋಹನ್ ಅವರ ಮೇಲೆ ಹಲ್ಲೆ ಯತ್ನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಅವರು ಭದ್ರತಾ ಪಡೆಗಳನ್ನು ನೇಮಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ ಹಠಾತ್ ದಾಳಿ ನಡೆದಾಗ ಗಾಯಗೊಂಡ ದಂಪತಿಗಳ ರಕ್ಷಣೆಗೆ ನಿಂತ ಭದ್ರತಾ ಸಿಬ್ಬಂದಿ ಆರೋಪಿಗಳನ್ನು ಸೆರೆ ಹಿಡಿಯಲು ವಿಫಲರಾಗಿದ್ದಾರೆ.
 
ಮೇಯರ್ ಹತ್ಯೆ ಹಿನ್ನೆಲೆಯಲ್ಲಿ ಚಿತ್ತೂರಿನಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಟೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ