ಎಂಪಿ ಅನುದಾನ ಮೊತ್ತ ಹೆಚ್ಚಳಕ್ಕೆ ಕೇಂದ್ರ ಸರಕಾರ ಚಿಂತನೆ

ಗುರುವಾರ, 23 ಏಪ್ರಿಲ್ 2015 (20:54 IST)
ಸಂಸದರ ಪ್ರದೇಶಾಭಿವೃದ್ಧಿ ನಿಧಿ ಅಡಿ ಪ್ರತಿ ವರ್ಷ ಸಂಸದರಿಗೆ ನೀಡಲಾಗುತ್ತಿರುವ ಅನುದಾನ ಮೊತ್ತವನ್ನು 5 ಕೋಟಿಯಿಂದ ₨ 25 ಕೋಟಿ ರೂಪಾಯಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

‘ಸಂಸದರ ಪ್ರದೇಶಾಭಿವೃದ್ಧಿ ನಿಧಿ  ಹೆಚ್ಚಳ ಪ್ರಸ್ತಾಪ ಸದ್ಯ ಸರ್ಕಾರದ ಪರಿಶೀಲನೆಯಲ್ಲಿದ್ದು, ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ’ ಅಂಕಿಅಂಶ  ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌  ಲೋಕಸಭೆಗೆ ತಿಳಿಸಿದರು.

ಲೋಕಸಭೆಯ ಉಪಾಧ್ಯಕ್ಷರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ ಸಂಬಂಧಿಸಿದ ಸಂಸದೀಯ ಸಮಿತಿ ಅಧ್ಯಕ್ಷರು ಇದೇ ಫೆಬ್ರುವರಿ 25ರಂದು ಸಂಸದರ ಅನುದಾನ ಹೆಚ್ಚಳ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ಅವರು ತಿಳಿಸಿದರು.

ಈ ಹಿಂದೆ 2013ರಲ್ಲಿ ಸಂಸದರ ಅನುದಾನ ಮೊತ್ತವನ್ನು 5 ಕೋಟಿಯಿಂದ 10 ಕೋಟಿಗೆ ಹೆಚ್ಚಿಸುವಂತೆ ಸಂಸದೀಯ ಸಮಿತಿ ಶಿಫಾರಸು ಮಾಡಿತ್ತು.

ಏನಿದು ಸಂಸದರ ನಿಧಿ?

1993–94ರಲ್ಲಿ ಮೊದಲ ಬಾರಿಗೆ  ಪ್ರತಿ ಸಂಸದರಿಗೂ  ಪ್ರದೇಶಾಭಿವೃದ್ಧಿ ನಿಧಿ ಅಡಿ ಅನುದಾನ ನೀಡುವ ಯೋಜನೆ  ಜಾರಿಯಾಯಿತು.

ಲೋಕಸಭಾ ಸದಸ್ಯರು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಈ ಅನುದಾನ  ಬಳಸಬಹುದು.  ರಾಜ್ಯಸಭಾ ಸದಸ್ಯರು ತಾವು ಆಯ್ಕೆಯಾದ ರಾಜ್ಯದ  ಯಾವುದೇ ಕ್ಷೇತ್ರ ಮತ್ತು ನಾಮಕರಣಗೊಂಡ ಸಂಸದರು ದೇಶದ ಯಾವುದೇ ಕ್ಷೇತ್ರದಲ್ಲಿ ಅನುದಾನ ವಿನಿಯೋಗಿಸಬಹುದು.

ವೆಬ್ದುನಿಯಾವನ್ನು ಓದಿ