ತನ್ನ ಮೇಲೆ ದಾಳಿ ಮಾಡಿದವರನ್ನು ಗುರುತಿಸಿದ ಕನ್ಹಯ್ಯ ಕುಮಾರ್

ಶನಿವಾರ, 27 ಫೆಬ್ರವರಿ 2016 (13:52 IST)
ಫೆಬ್ರವರಿ 17 ರಂದು ದೆಹಲಿಯ ಪಟಿಯಾಲಾ ಕೋರ್ಟ್‌ನಲ್ಲಿ ತನ್ನ ಮೇಲೆ ದಾಳಿ ನಡೆಸಿದವರನ್ನು ಕನ್ಹಯ್ಯ ಕುಮಾರ್ ಗುರುತಿಸಿದ್ದಾನೆ. 
 
ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ಸಂದರ್ಭದಲ್ಲಿ ವಕೀಲರ ಉಡುಪು ತೊಟ್ಟುಕೊಂಡಿದ್ದವರು ನನ್ನ ಮೇಲೆ ಹಲ್ಲೆ ನಡೆಸಿದ್ದರು.ಪ್ರವೇಶ ದ್ವಾರದವರೆಗೂ ನನ್ನ ಮೇಲೆ ದಾಳಿ ನಡೆಸಲಾಯಿತು. ಆದರೆ, ಸ್ಥಳದಲ್ಲೇ ಇದ್ದ ಪೊಲೀಸರು ನಿಷ್ಕ್ರಿಯರಾಗಿದ್ದರು. ದಾಳಿಯನ್ನು ತಡೆಯಲು ಅವರು ಪ್ರಯತ್ನಿಸಲಿಲ್ಲ ಎಂದು ಕನ್ನಯ್ಯ ಆರೋಪಿಸಿದ್ದಾನೆ. 
 
ನನ್ನ ಮೇಲೆ ದಾಳಿ ಮಾಡಿದವರು ಯಾರೆಂದು ಪೊಲೀಸರಿಗೆ ತೋರಿಸಿದಾಗ,  ಯಾರವರು ಎಂದು ನನ್ನನ್ನೇ ಪ್ರಶ್ನಿಸಿದರು. ಅವರು ಯಾರೆಂದು ನನಗೆ ಹೇಗೆ ತಿಳಿದಿರಲು ಸಾಧ್ಯ. ವ್ಯಕ್ತಿಯನ್ನು ತೋರಿಸಿದರೂ ಸಹ ಪೊಲೀಸರು ಯಾವುದೇ ಕ್ರಮಕೈಗೊಳ್ಳಲಿಲ್ಲ. ಮನಸ್ಸು ಮಾಡಿದ್ದರೆ ಆತನನ್ನು ಬಂಧಿಸಬಹುದಾಗಿತ್ತು. ಆದರೆ ಪೊಲೀಸರು ತಟಸ್ಥರಾಗಿದ್ದರು ಎಂದು ಆತ ಕಿಡಿಕಾರಿದ್ದಾನೆ. 
 
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟ ಮೇಲೆ ಕನ್ನಯ್ಯಾ ಬಹಿರಂಗವಾಗಿ ಯಾವುದಕ್ಕೂ ಪ್ರತಿಕ್ರಿಯಿಸಿರಲಿಲ್ಲ.  ಇದೇ ಪ್ರಥಮ ಬಾರಿ ಆತ  ಇದೀಗ ಫೆ.17ರಂದು ನ್ಯಾಯಾಲಯದ ಆವರಣದಲ್ಲಿ ತನ್ನ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಮಾತನಾಡಿದ್ದಾನೆ.
 

ವೆಬ್ದುನಿಯಾವನ್ನು ಓದಿ