ಹಾಲಿನ ದರದಲ್ಲಿ 10 ರೂ. ಏರಿಕೆ: ಬೆಚ್ಚಿಬಿದ್ದ ತಮಿಳುನಾಡು ಜನತೆ

ಭಾನುವಾರ, 26 ಅಕ್ಟೋಬರ್ 2014 (13:21 IST)
ಇತ್ತೀಚೆಗೆ ಅಣ್ಣಾ ಡಿಎಂಕೆ ಅಧಿನಾಯಕಿ ಜೆ. ಜಯಲಲಿತಾ ಜೈಲುಪಾಲಾಗಿದ್ದನ್ನು ನೋಡಿ ಬೆಚ್ಚಿಬಿದ್ದಿದ್ದ ತಮಿಳುನಾಡು ಜನತೆ, ಇದೀಗ ಅವರ ಉತ್ತರಾಧಿಕಾರಿ ಪನ್ನೀರಸೆಲ್ವಂ ನೇತೃತ್ವದ ರಾಜ್ಯ ಸರ್ಕಾರ ಹಾಲಿನ ಬೆಲೆ ಏರಿಸಿರುವ ಪರಿ ನೋಡಿ ಬೆಚ್ಚಿಬಿದ್ದಿದ್ದಾರೆ. 
 
ಕಾರಣ, ನ.1ರಿಂದ ಜಾರಿಯಾಗುವಂತೆ ಪ್ರತಿ ಲೀಟರ್‌ ಹಾಲಿನ ಬೆಲೆಯನ್ನು ಏಕಾಏಕಿ 10 ರೂ.ನಷ್ಟು ಏರಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಆವಿನ್‌ ಬ್ರ್ಯಾಂಡ್‌ನ‌ ಸಾಮಾನ್ಯ ಮಾದರಿಯ ಹಾಲಿನ ದರ ಲೀ.ಗೆ 24 ರೂ.ನಿಂದ 34 ರೂ.ಗೆ ಏರಿಕೆಯಾಗಲಿದೆ. 
 
'ಕಳೆದ ವರ್ಷ ಹಾಲಿನ ಸಂಗ್ರಹದ ಬೆಲೆ ಏರಿಕೆ ಮಾಡಿದ್ದರೂ, ಗ್ರಾಹಕರಿಗೆ ವಿತರಿಸುತ್ತಿದ್ದ ಬೆಲೆಯಲ್ಲಿ ಏರಿಕೆ ಮಾಡಲಾಗಿರಲಿಲ್ಲ. ಹೀಗಾಗಿ ಇದೀಗ ಅನಿವಾರ್ಯವಾಗಿ ಹಾಲಿನ ಬೆಲೆಯನ್ನು ಲೀ.ಗೆ 10 ರೂ.ನಷ್ಟು ಏರಿಸಲಾಗಿದೆ. ಈ ಏರಿಕೆಯ ಹೊರತಾಗಿಯೂ ಖಾಸಗಿ ಕಂಪನಿಗಳ ಹಾಲಿನ ದರಕ್ಕಿಂತಲೂ ಸರ್ಕಾರಿ ಸ್ವಾಮ್ಯದ 'ಆವಿನ್‌' ಹಾಲಿನ ಬೆಲೆ ಕಡಿಮೆಯೇ ಇರಲಿದೆ' ಎಂದು ಪನ್ನೀರಸೆಲ್ವಂ, ನಿರ್ಧಾರವನ್ನು ಸಮರ್ಥಿಸಿರಿದ್ದಾರೆ. ರಾಜ್ಯದಲ್ಲಿ ಖಾಸಗಿ ಕಂಪನಿ ಹಾಲಿನ ಬೆಲೆ ಲೀ.ಗೆ 45 ರೂ. ಇದೆ. 
 
ವಿರೋಧ: ಈ ನಡುವೆ ಸರ್ಕಾರದ ನಿರ್ಧಾರವನ್ನು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ತೀವ್ರವಾಗಿ ವಿರೋಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ