ಮೃತ್ಯುಂಜಯ: 6 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾದ ಯೋಧ

ಮಂಗಳವಾರ, 9 ಫೆಬ್ರವರಿ 2016 (09:32 IST)
ಇದನ್ನು ಪವಾಡ ಎನ್ನುತ್ತಿರೋ, ಆತ್ಮಸ್ಥೈರ್ಯವೆನ್ನುತ್ತೀರೋ? ನಿಮಗೆ ಬಿಟ್ಟಿದ್ದು. ಸಿಯಾಚಿನ್‌ನ ನಿರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ ಕರ್ನಾಟಕದ ಯೋಧ, ಲ್ಯಾನ್ಸ್ ನಾಯಕ್  ಹನುಮಂತಪ್ಪ ಕೊಪ್ಪದ ಸೋಮವಾರ ರಾತ್ರಿ ಜೀವಂತವಾಗಿ ಪತ್ತೆಯಾಗಿದ್ದಾರೆ.  ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಪ್ರಕಟನೆ ಹೊರಡಿಸಿದೆ.

 
ಅಸ್ವಸ್ಥ ಸ್ಥಿತಿಯಲ್ಲಿರುವ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸತತ ಆರು ದಿನಗಳ ಕಾಲ 25 ಅಡಿ ಆಳದಲ್ಲಿ -45 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿದ್ದರಿಂದ ದೇಹ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ನವದೆಹಲಿಯ ಆರ್. ಆರ್. ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. 
 
ಕುಂದಗೋಳ ತಾಲ್ಲೂಕಿನ ಬೆಟ್ಟದೂರಿನ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಸೇನೆಯಲ್ಲಿರುವ ಅವರು ಲ್ಯಾನ್ಸ್ ನಾಯಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 
 
ಕಳೆದ 6 ದಿನಗಳ ಹಿಂದೆ ಸಂಭವಿಸಿದ ಹಿಮಪಾತದಲ್ಲಿ ಕರ್ನಾಟಕದ ಮೂವರು ಸೇರಿದಂತೆ 10 ಯೋಧರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಮೃತರಾಗಿದ್ದಾರೆನ್ನಲಾಗಿದ್ದ ಹನುಮಂತಪ್ಪ ಈಗ ಜೀವಂತವಾಗಿ ಪತ್ತೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ