ನಾಪತ್ತೆಯಾದ ಸೇನಾಧಿಕಾರಿ ಸುರಕ್ಷಿತವಾಗಿ ಪತ್ತೆ

ಶನಿವಾರ, 13 ಫೆಬ್ರವರಿ 2016 (13:00 IST)
ಕಳೆದ 6 ದಿನಗಳಿಂದ ಪಾಟ್ನಾ-ದೆಹಲಿ ರೈಲಿನಿಂದ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಅಧಿಕಾರಿ ಕ್ಯಾಪ್ಟನ್ ಶಿಖರ್‌ ದೀಪ್ ಪ್ರಕರಣ ಸುಖಾಂತ್ಯ ಕಂಡಿದ್ದು ಇಂದು ಅವರು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ತಮ್ಮ ಗುರುತನ್ನವರು ಬಹಿರಂಗ ಪಡಿಸಿದ್ದಾರೆ. ತಮ್ಮನ್ನು ಪಾಟ್ಣಾ ರೈಲು ನಿಲ್ದಾಣದ ಬಳಿ ಕೆಲವರು ಅಪಹರಿಸಿದ್ದರು. ಅವರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬರಲು ಯಶಸ್ವಿಯಾದ ತಾನು ಫೈಜಾಬಾದ್‌ಗೆ ರೈಲು ಹತ್ತಿದೆ ಎಂದು ಅವರು ಹೇಳಿದ್ದಾರೆ
 
ಜಮ್ಮು ಕಾಶ್ಮೀರದ ನೌಶೇರಾದಲ್ಲಿ 8 ನೇ ಸಿಖ್ ಲಘು ಪದಾತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 24 ವರ್ಷದ ಶಿಖರ್ ದೀಪ್ ಫೆಬ್ರವರಿ 6 ರಂದು ಮಹಾನಂದಾ ಎಕ್ಸಪ್ರೆಸ್‌ ರೈಲಿನಲ್ಲಿ ಕಟಿಹಾರ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.
 
ಶಿಖರ್ ದೀಪ್ ಅವರನ್ನು ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆಬಂದಿದ್ದ ಅವರ ಸಂಬಂಧಿಗೆ ಶಿಖರ್ ಅವರ ಲಗೇಜ್, ಫೋನ್, ವ್ಯಾಲೆಟ್ ಮಾತ್ರ ಪತ್ತೆಯಾಗಿತ್ತು. ಶಿಖರ್ ಭಾವ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ತಮ್ಮ ಮಗನ ನಾಪತ್ತೆ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದೆಂದು ಶಿಖರ್ ತಂದೆ  ಕರ್ನಲ್ ಅನಂತ್ ಕುಮಾರ್ ಶಂಕೆ ವ್ಯಕ್ತ ಪಡಿಸಿದ್ದರು.
 
ಕಟಿಹಾರ್‌‌‌ನಲ್ಲಿ ತಮ್ಮನ್ನು ಅಪಹರಿಸಿ ಪಾಟ್ನಾಗೆ ಕೊಂಡೊಯ್ದು ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ಪ್ರಜ್ಞೆ ಮರಳಿದಾಗ ನಾನೊಂದು ಕತ್ತಲ ಕೋಣೆಯಲ್ಲಿದ್ದೆ. ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಶಿಖರ್ ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಶಿಖರ್‌ದೀಪ್ ಅವರ ಮೈ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದಿರುವುದು ಪೊಲೀಸರಲ್ಲಿ ಶಂಕೆಯನ್ನು ಹುಟ್ಟಿಸಿದೆ.

ವೆಬ್ದುನಿಯಾವನ್ನು ಓದಿ