ನಾಪತ್ತೆಯಾದ ಬಾಲಕಿ ಶವವಾಗಿ ಪತ್ತೆ: ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ

ಶುಕ್ರವಾರ, 4 ಸೆಪ್ಟಂಬರ್ 2015 (11:13 IST)
ಲುಧಿಯಾನಾದಲ್ಲಿ ಬುಧವಾರ ನಾಪತ್ತೆಯಾಗಿದ್ದ ಶಾಲಾ ಬಾಲಕಿಯೊಬ್ಬಳು ಕಳೆದ ಗುರುವಾರ ಸಂಜೆ ಕಾಲುವೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ದೇಹದ ತುಂಬ ಗಾಯಗಳಾಗಿದ್ದು ಅತ್ಯಾಚಾರ ನಡೆಸಿ ಕೊಲೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 
ಶವವನ್ನು ಪರೀಕ್ಷಿಸಿರುವ ವೈದ್ಯರು ಸಾಮೂಹಿಕ ಅತ್ಯಾಚಾರವಾಗಿರುವುದನ್ನು ದೃಢಪಡಿಸಿದ್ದಾರೆ. 
 
ಶಿಮ್ಲಾಪುರಿ ಪ್ರದೇಶದ ನಿವಾಸಿಯಾದ ಬಾಲಕಿ ಬುಧವಾರ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಅಪಹರಣಕ್ಕೊಳಗಾಗಿದ್ದಳು.  ಈ ಕುರಿತು ಪೋಷಕರು ಪ್ರಕರಣವನ್ನು ದಾಖಲಿಸಿದ್ದರು. ಆದರೆ ಬಾಲಕಿ ಗುರುವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾಳೆ. 
 
ಆಕೆಯ ದೇಹದ ಮೇಲೆ 17 ಗಾಯದ ಗುರುತುಗಳಿದ್ದು, ತಲೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿ ಆಕೆಯನ್ನು ಕೊಲೆಗೈದು ಶವವನ್ನು ಕಾಲುವೆಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಬಾಲಕಿಯ ಸಂಬಂಧಿಕರು ಮತ್ತು ಸ್ಥಳೀಯರು ಗುರುವಾರ ಬೆಳಿಗ್ಗೆಯಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. 

ವೆಬ್ದುನಿಯಾವನ್ನು ಓದಿ