2 ನೇ ತರಗತಿ ಬಾಲಕಿ ಶೌಚಕ್ಕೆ ಹೋದಾಗ ವಿಡಿಯೋ ಚಿತ್ರೀಕರಣ ಮಾಡಿದ ಬಾಲಕರು

ಮಂಗಳವಾರ, 25 ನವೆಂಬರ್ 2014 (15:13 IST)
ಹದಿಹರೆಯದವರ ನಡುವೆ ಹೆಚ್ಚುತ್ತಿರುವ ಅಪರಾಧ ಪ್ರವೃತ್ತಿ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಮತ್ತೊಂದು ಉದಾಹರಣೆಯಾಗಿ ಹೈದರಾಬಾದ್‌ನಲ್ಲಿ ಅವಮಾನಕರ ಘಟನೆಯೊಂದು ಬೆಳಕಿಗೆ ಬಂದಿದೆ. 2 ನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಹುಡುಗಿಯೋರ್ವಳು ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ 9 ಜನ ವಿದ್ಯಾರ್ಥಿಗಳು ಆ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಲಭ್ಯವಿರುವ ಮಾಹಿತಿಗಳ ಪ್ರಕಾರ  ಕಳೆದ ವಾರಾಂತ್ಯದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸುದ್ದಿ ಪ್ರಸಾರವಾಗುತ್ತಿದ್ದಂತೆ  ಸಿಟ್ಟಿಗೆದ್ದ ವಿದ್ಯಾರ್ಥಿಗಳ ಪಾಲಕರು ಈ ನಾಚಿಕೆಗೇಡು, ಆತಂಕಕಾರಿ ಕೃತ್ಯದ ವಿರುದ್ಧ ಶಾಲಾ ಆವರಣದಲ್ಲಿ ಪ್ರತಿಭಟನೆಗಿಳಿದಿದ್ದಾರೆ.
 
 ಪಾಲಕರ ಮನವಿಗೆ ಸ್ಪಂದಿಸಿರುವ ಶಾಲಾ ಆಡಳಿತ ಮಂಡಳಿ ಆರೋಪಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ. ತಪ್ಪು ಮಾಡಿದ ಬಾಲಕರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪಾಲಕರು ಆಗ್ರಹಿಸಿದ್ದಾರೆ. 
 
ಆದರೆ, ಶಾಲೆಯ ಪ್ರಾಂಶುಪಾಲರು ಘಟನೆಯನ್ನು ನಿರಾಕರಿಸಿದ್ದಾರೆ. "ಪುಟ್ಟ ಬಾಲಕಿಯರಿಬ್ಬರು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಬಾಲಕನೊಬ್ಬ ಆ ವಾಶ್ ರೂಮ್ ಪ್ರವೇಶಿಸಿದ್ದಾನೆ. ನಡೆದಿದ್ದು ಇಷ್ಟೇ. ಆದರೆ ಈ ವಿಷಯವನ್ನು ಅನಾವಶ್ಯಕವಾಗಿ ದೊಡ್ಡದು ಮಾಡಲಾಗುತ್ತಿದೆ. ಯಾಕೆ ಹೀಗಾಯಿತೆಂದು ತಿಳಿಯುತ್ತಿಲ್ಲ. ನಾವೇನು ಸುಮ್ಮನೆ ಕುಳಿತಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ