ಮೋದಿ ಜತೆಗಿದ್ದರೆ ಜಶೋಧಾ ಬೆನ್ ಆರ್‌ಟಿಐ ಶುಲ್ಕವನ್ನಾದರೂ ಉಳಿಸುತ್ತಿದ್ದರು: ಕಾಂಗ್ರೆಸ್ ಲೇವಡಿ

ಬುಧವಾರ, 26 ನವೆಂಬರ್ 2014 (18:31 IST)
ಪ್ರಧಾನಿ ಮೋದಿಯವರಿಗೆ ಅಣಕವಾಡಲು ಸಿಕ್ಕ ಅವಕಾಶವನ್ನು ಎಂದಿಗೂ ಮಿಸ್ ಮಾಡಿಕೊಳ್ಳಲು ಬಯಸದ ಕಾಂಗ್ರೆಸ್‌, ಈಗ ಜಶೋಧಾ ಬೆನ್  ಆರ್‌ಟಿಐ ಅರ್ಜಿ ಸಲ್ಲಿಸಿರುವುದನ್ನು ಬಳಸಿಕೊಂಡು ಮೋದಿಯವರಿಗೆ ವ್ಯಂಗ್ಯವಾಡುತ್ತಿದೆ. ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದ ಪಾರದರ್ಶಕ ಕಾನೂನಿನ ಅವಶ್ಯಕತೆ ಪ್ರಧಾನಿ ಪತ್ನಿಗೂ ಅನಿವಾರ್ಯವಾಯಿತು ಎಂದು ಕಾಂಗ್ರೆಸ್ ಕಿಚಾಯಿಸಿದೆ. 

ನರೇಂದ್ರ ಮೋದಿ ಪತ್ನಿ ಜಶೋಧಾಬೆನ್ ಸೋಮವಾರ ಮಾಹಿತಿ ಹಕ್ಕು ಅರ್ಜಿಯೊಂದನ್ನು ಹಾಕಿದ್ದಾರೆ. ಈ ಮೂಲಕ ಪ್ರಧಾನಮಂತ್ರಿ ಪತ್ನಿ ಎಂಬ ಕಾರಣಕ್ಕೆ ತಮಗೆ ನೀಡಲಾಗಿರುವ ಭದ್ರತೆಗೆ ಸಂಬಂಧಿಸಿದಂತೆ ಕೆಲ ವಿವರಣೆಯನ್ನವರು ಕೇಳಿದ್ದಾರೆ.
 
ಭದ್ರತಾ ಸಿಬ್ಬಂದಿಯಿಂದಲೇ ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾಗಿದ್ದನ್ನು ಉಲ್ಲೇಖಿಸಿರುವ ಜಶೋಧಾಬೆನ್, ತನ್ನ ರಕ್ಷಣೆಗಾಗಿ ನೇಮಿಸಿರುವ ಅಂಗರಕ್ಷಕರ ಕುರಿತು ಸಂಪೂರ್ಣ ಮಾಹಿತಿ ಕೇಳಿದ್ದಾರೆ. 
 
"ನನಗೆ ನೀಡಿರುವ ಭದ್ರತೆಯಿಂದಲೇ ನಾನು ಮತ್ತು ನನ್ನ ಕುಟುಂಬ ವರ್ಗ ತುಂಬಾ ಭಯಭೀತರಾಗಿದ್ದೇವೆ. ಭದ್ರತಾ ಸಿಬ್ಬಂದಿಗಳು ಅತಿಥಿಗಳ ರೀತಿ ವರ್ತಿಸುತ್ತಿದ್ದಾರೆ. ನನಗೆ ಭದ್ರತೆ ನೀಡುವಂತೆ ಆದೇಶಿರುವ ಆದೇಶ ಪ್ರತಿ ತೋರಿಸುವಂತೆ ಕೇಳಿದರೆ ಅವರು ನೀಡುತ್ತಿಲ್ಲ. ಆದ್ದರಿಂದ ಈ ಕುರಿತ ಎಲ್ಲ ವಿವರಣೆ ಕೊಡಿ" ಎಂದು ಮನವಿ ಸಲ್ಲಿಸಿದ್ದಾರೆ. 
 
ಈ ಬೆಳವಣಿಗೆ ಕುರಿತಂತೆ ಹೇಳಿಕೆ ನೀಡಲು ನಿರಾಕರಿಸಿರುವ ಎಐಸಿಸಿ ವಕ್ತಾರ ಶಕೀಲ್ ಅಹಮದ್ ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಹಿಂಜರಿಕೆಯಾಗುತ್ತಿದೆ ಎಂದಿದ್ದಾರೆ.
 
ಆದಾಗ್ಯೂ, ಈ ಕುರಿತು ಮೋದಿಯವರಿಗೆ ಕಿಚಾಯಿಸಿರುವ ಅಹ್ಮದ್, "  ಮೋದಿ ತಮ್ಮ ಪತ್ನಿಯನ್ನು ಜತೆಗಿರಿಸಿಕೊಂಡಿದ್ದರೆ ಮಾಹಿತಿ ಹಕ್ಕು ಅರ್ಜಿಯನ್ನು ದಾಖಲಿಸಲು ಜಶೋಧಾ ಬೆನ್ ಸಲ್ಲಿಸಿದ್ದ  ಹಣನ್ನಾದರೂ ಉಳಿಸಬಹುದಾಗಿತ್ತು", ಎಂದಿದ್ದಾರೆ. 
 
ಯುಪಿಎ ಸರಕಾರ ಜಾರಿಯಲ್ಲಿ ತಂದಿದ್ದ ಮಾಹಿತಿ ಹಕ್ಕು ಕಾನೂನು ಪ್ರಧಾನಮಂತ್ರಿಯವರ ಪತ್ನಿಗೂ ಸಹ ಉಪಯೋಗಕ್ಕೆ ಬಂತು ಎಂಬುದು ನಮಗೆ ಸಮಾಧಾನ ತಂದ ವಿಷಯ ಎಂದು ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ