ಪಂಜಾಬ್ ಸಿಎಂ ಬಾದಲ್ ಭಾರತದ ನೆಲ್ಸನ್ ಮಂಡೇಲಾರಂತೆ: ಪ್ರಧಾನಿ ಮೋದಿ

ಸೋಮವಾರ, 12 ಅಕ್ಟೋಬರ್ 2015 (15:26 IST)
ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಭಾರತದ ನೆಲ್ಸನ್ ಮಂಡೇಲಾರಂತೆ ಎಂದು ಪ್ರಧಾನಿ ನರೇಂದ್ರ ಮೋದಿ ವರ್ಣಿಸಿರುವುದು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ.
 
ಲೋಕ ನಾಯಕ ಜಯಪ್ರಕಾಶ್ ನಾರಾಯಣ್‌ ಅವರ 113ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಲೋಕತಂತ್ರ ಪ್ರಹರಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರಕಾಶ್ ಸಿಂಗ್ ಬಾದಲ್‌ ಅಧಿಕಾರದಲ್ಲಿರುವವರನ್ನು ವಿರೋಧಿಸಿದ್ದರಿಂದ ರಾಜಕೀಯ ಕಾರಣಗಳಿಗಾಗಿ ಎರಡು ದಶಕಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು. ಅವರ ಜೈಲುವಾಸದ ಬಗ್ಗೆ ದೇಶದ ಜನತೆಗೆ ಹೆಚ್ಚಿನ ಮಾಹಿತಿಯಿಲ್ಲದಿರುವುದು ದುರದೃಷ್ಟಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. 
 
ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಭಾರತದ ನೆಲ್ಸನ್ ಮಂಡೇಲಾರಂತೆ. ಅಧಿಕಾರದಲ್ಲಿರುವವರ ರಾಜಕೀಯ ನಿಲುವುಗಳನ್ನು ಬಾದಲ್ ವಿರೋಧಿಸಿದ್ದರಿಂದ 20 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕಾಯಿತು ಎಂದರು. 
 
ಪ್ರಧಾನಿ ಮೋದಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಅಮರೀಂದರ್ ಸಿಂಗ್, ಮೋದಿಯವರಿಗೆ ಜ್ಞಾನವಿಲ್ಲ ಎಂದು ಯಾರು ಹೇಳುತ್ತಾರೆ? ಮಂಡೇಲಾರಿಗೆ ಭಾರತ ರತ್ನ ನೀಡಿದಂತೆ, ಬಾದಲ್‌ ಅವರಿಗೂ ನೊಬೆಲ್ ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಲಿ ಎಂದು ಟ್ವಿಟ್ಟರ್‌ನಲ್ಲಿ ಲೇವಡಿ ಮಾಡಿದ್ದಾರೆ. 
 
ಪ್ರಧಾನಿ ಮೋದಿಗೆ ತಾವು ಯಾವ ರೀತಿ ಹೇಳಿಕೆ ನೀಡಿದ್ದೇನೆ ಎನ್ನುವ ಬಗ್ಗೆ ಅರಿವಿರುವುದಿಲ್ಲ. ಅಧವಾ ಅವರಿಗೆ ನಿಜವಾಗಿಯೂ ಏನೂ ಗೊತ್ತಿಲ್ಲ. ಒಂದು ವೇಳೆ ಮೋದಿ, ಬಾದಲ್ ಅವರನ್ನು ಮಂಡೇಲಾರಿಗೆ ಹೋಲಿಸಿದ್ದಲ್ಲಿ, ಏಕಾಂಗಿಯಾಗಿ ಹೋರಾಡಿದ ದಕ್ಷಿಣ ಆಫ್ರಿಕಾದ ಧೀಮಂತ ನಾಯಕ ನೆಲ್ಸನ್ ಮಂಡೇಲಾರಿಗೆ ಅಪಮಾನ ಮಾಡಿದಂತೆ ಎಂದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ