ಸಾರ್ವಜನಿಕ ಚರ್ಚೆಗೆ ಬರುವಂತೆ ಸೋನಿಯಾಗೆ ಮೋದಿ ಸವಾಲು

ಶುಕ್ರವಾರ, 25 ಏಪ್ರಿಲ್ 2014 (09:46 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುಜರಾತ್ ವಿಷಯದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಈ ಕುರಿತು ಸಾರ್ವಜನಿಕ ಚರ್ಚೆಗೆ ಬರುವಂತೆ ಸೋನಿಯಾರವರಿಗೆ ಬಹಿರಂಗ ಸವಾಲೆಸೆದಿದ್ದಾರೆ. 
 
"ಸುಳ್ಳು ಹೇಳುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದಾದರೆ  ಚುನಾವಣಾ ಆಯೋಗ  ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಮೋದಿ ಹೇಳಿದ್ದಾರೆ.
 
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು "ಮೇಡಮ್ ಸೋನಿಯಾ ಗುಜರಾತ್ ಮತ್ತು ದೇಶದ ಜನರನ್ನು ತಪ್ಪು ದಾರಿಗೆ ಎಳೆಯಲು  ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ನಾನು ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲೆಸೆಯುತ್ತಿದ್ದೇನೆ" ಎಂದರು.
 
'ಶಾಲೆಯನ್ನು ಅರ್ಧಕ್ಕೆ ಬಿಡುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿದರೆ ಗುಜರಾತ್ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ' ಎಂದು ಸೋನಿಯಾ ಪ್ರತಿಪಾದಿಸಿದ್ದರು. "ಅದು ಸತ್ಯಕ್ಕೆ ದೂರವಾದದ್ದು. ನಾನು ಅಧಿಕಾರಕ್ಕೆ ಬಂದಾಗ ಪ್ರಾಥಮಿಕ ಶಾಲೆಯಲ್ಲಿ ಈ ಪ್ರಮಾಣ 21%ರಷ್ಟಿತ್ತು. ಈಗ ಅದು 2% ಕ್ಕೆ ಇಳಿಕೆಯಾಗಿದೆ ಎಂದು ಮೋದಿ ಸ್ಪಷ್ಟಿಕರಿಸಿದ್ದಾರೆ". 
 
"ಅಪೌಷ್ಟಿಕತೆ ಬಗ್ಗೆ ಕೂಡ ಸೋನಿಯಾ ಗಾಂಧಿ ದೇಶದ ಜನತೆಗೆ ಋಣಾತ್ಮಕ ಸಂದೇಶ ನೀಡಲು ಯತ್ನಿಸಿದ್ದಾರೆ. ಅಪೌಷ್ಟಿಕತೆ ದೇಶದ ಇತರ ಭಾಗಗಳಲ್ಲಿ ಕೂಡ ಇದೆ. ಆದರೆ ಈ ಸಮಸ್ಯೆಯಿಂದ ಹೊರಬರಲು ನಾವು  ಗುರುತರ ಕೆಲಸ ಮಾಡಿದ್ದೇವೆ. ಸಿಎಜಿ ಕೂಡ ನಮ್ಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದೆ" ಎಂದು ಬಿಜೆಪಿ ನಾಯಕ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ