ಮೋದಿ ಸರಕಾರಕ್ಕೆ ಮೊಲವನ್ನು ಕೂಡ ತರಲಾಗದು: ಕಪ್ಪು ಹಣದ ಕುರಿತು ಶರದ್ ಯಾದವ್ ಲೇವಡಿ

ಶುಕ್ರವಾರ, 31 ಅಕ್ಟೋಬರ್ 2014 (17:41 IST)
ವಿದೇಶಿ ಬ್ಯಾಂಕ್‌ಗಳಲ್ಲಿರುವ ಅಕ್ರಮ ಹಣವನ್ನು ಮರಳಿ ತರುವ ನರೇಂದ್ರ ಮೋದಿ ಸರಕಾರದ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಸಂಯುಕ್ತ ಜನತಾದಳ ಅಧ್ಯಕ್ಷ ಶರದ್ ಯಾದವ್ ಹೇಳಿದ್ದಾರೆ. 

ಕಪ್ಪು ಹಣವನ್ನು ಮರಳಿ ತರುವ ಬಗ್ಗೆ ರಾಷ್ಟ್ರಕ್ಕೆ ಮೋದಿ ಸರಕಾರ ಕನಸು ಕಾಣಿಸುತ್ತಿದ್ದು, ಅದು ಸಾಕಾರವಾಗಲು ಸಾಧ್ಯವಿಲ್ಲ. ಹೊರ ದೇಶಗಳಿಂದ,  ಒಂದು ಮೊಲವನ್ನು ಕೂಡ ತರಲು ಕೇಂದ್ರಕ್ಕೆ ಸಾಧ್ಯವಾಗುವುದಿಲ್ಲ,"  ಎಂದು ಯಾದವ್ ವ್ಯಂಗ್ಯವಾಡಿದ್ದಾರೆ.
 
ದೆಹಲಿಯಿಂದ ಪಾಟ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಜೆಡಿಯು ಮುಖ್ಯಸ್ಥ, ಸುಪ್ರೀಂಕೋರ್ಟ್‌ಗೆ ಸರಕಾರ ನೀಡಿರುವ ಕಪ್ಪು ಹಣ ಹೊಂದಿರುವ 627 ಖಾತೆದಾರರ ವಿಷಯದಲ್ಲಿ ದೇಶಾದ್ಯಂತ ನಡೆಯುತ್ತಿರುವ ಚರ್ಚೆಗೆ ಯಾವುದೇ ಪ್ರಸ್ತುತತೆ ಇಲ್ಲ ಎಂದಿದ್ದಾರೆ.  
 
ಕಪ್ಪುಹಣ ದೇಶಕ್ಕೆ ಹಿಂತಿರುಗಿ ಬರಲಾರದು ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ,"  ಎಂದು ಅವರು ಹೇಳಿದರು
 
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಪ್ಪು ಹಣ ಹಿಂತಿರುಗಿ ತರುತ್ತೇವೆ ಎಂದಿದ್ದ ಸರ್ಕಾರದ ಪ್ರಾಮಾಣಿಕತೆ ಮೇಲೆ ಸವಾಲೆಸೆದಿರುವ ಯಾದವ್,  "ಅವರು( ಬಿಜೆಪಿ) ರಾಷ್ಟ್ರದ ಜನತೆಗೆ ಆಕಾಶದಿಂದ, ಭೂಮಿಗೆ ನಕ್ಷತ್ರಗಳನ್ನು ತರುವ ಭರವಸೆ ನೀಡಿದರು. ಆದರೆ  ಹೇಗೆ ಮತ್ತು ಯಾವಾಗ ಎಂದು  ಹೇಳೇ ಇಲ್ಲ " ಎಂದು ಛೇಡಿಸಿದ್ದಾರೆ. 
 
ನವೆಂಬರ್ 13 ರಿಂದ  ನಡೆಯಲಿರುವ ಸಂಪರ್ಕ ಯಾತ್ರೆಯ ಅಂಗವಾಗಿ ಹಿರಿಯ ಮುಖಂಡ ನಿತೀಶ್ ಕುಮಾರ್ ಜತೆ ಚರ್ಚಿಸಲು ಯಾದವ್ ಪಾಟ್ನಾಕ್ಕೆ ಆಗಮಿಸಿದ್ದರು. 

ವೆಬ್ದುನಿಯಾವನ್ನು ಓದಿ