ಮೋದಿ ಕಡಕ್ ವಾರ್ನಿಂಗ್: ಸಚಿವರ ಫೈವ್‌ಸ್ಟಾರ್ ಹೋಟೆಲ್, ಪ್ರಥಮ ದರ್ಜೆ ಪ್ರಯಾಣಕ್ಕೆ ನಿಷೇಧ

ಗುರುವಾರ, 30 ಅಕ್ಟೋಬರ್ 2014 (17:54 IST)
ಕೇಂದ್ರ ಸರಕಾರ ಶೇ.10 ರಷ್ಟು ಅನಗತ್ಯವೆಚ್ಚವನ್ನು ಕಡಿತಗೊಳಿಸಲು ಸಚಿವರು ಪಂಚತಾರಾ ಹೋಟೆಲ್‌ಗಳ ವಾಸ ಮತ್ತು ವಿಮಾನದ ಪ್ರಥಮ ದರ್ಜೆ ಪ್ರಯಾಣಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ. 
 
ಕಳೆದೊಂದು ವರ್ಷದಿಂದ ಖಾಲಿಯಾಗಿ ಉಳಿದಿರುವ ಹುದ್ದೆಗಳು ಮತ್ತು ಹೊಸತಾಗಿ ನೇಮಕಾತಿ ಮಾಡಿಕೊಳ್ಳುವುದಕ್ಕೆ ಕೂಡಾ ಕೇಂದ್ರ ನಿಷೇಧ ಹೇರಿದೆ.
 
ಸಚಿವಾಲಯದ ಹಿರಿಯ ಅಧಿಕಾರಿಗಳು ತಮ್ಮ ಹಿರಿತನಕ್ಕೆ ತಕ್ಕಂತೆ ಬಜೆಟ್‌ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡನೇ ದರ್ಜೆ ಅಥವಾ ಎಕಾನಾಮಿ ದರ್ಜೆಯಲ್ಲಿ ಪ್ರಯಾಣಿಸಬಹುದು. ಆದರೆ, ವಿಮಾನದ ಪ್ರಥಮ ದರ್ಜೆಯ ಟಿಕೆಟ್ ಬುಕ್ ಮಾಡುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆ ನೀಡಿದೆ.
 
ಮುಂಬರುವ 2014-15ರ ಸಾಲಿನಲ್ಲಿ ಜಿಡಿಪಿ ಶೇ.4.1 ರಷ್ಟು ಕೊರತೆಯನ್ನು ನಿಯಂತ್ರಿಸಲು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
 
ಕೇಂದ್ರ ಸಚಿವರು ಆದಷ್ಟು ತಮ್ಮ ಸಚಿವಾಲಯದ ಸಭೆಗಳನ್ನು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ನಡೆಸುವಂತೆ ಸಲಹೆ ನೀಡಲಾಗಿದೆ.  
 
ಸೇನಾಪಡೆಗಳು, ಪ್ಯಾರಾ ಮಿಲಿಟರಿ ಮತ್ತು ಭದ್ರತಾ ಸಂಸ್ಥೆಗಳು ಕಾರ್ಯಾಚರಣೆಗಾಗಿ ಹೊಸತಾದ ವಾಹನಗಳನ್ನು ಖರೀದಿಸಬಹುದಾಗಿದೆ. ಇತರ ಕಾರಣಗಳಿಗಾಗಿ ವಾಹನಗಳನ್ನು ಖರೀದಿಸಲು ನಿಷೇಧ ಹೇರಲಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ