ಪ್ರಧಾನಿ ನರೇಂದ್ರ ಮೋದಿ ಸರಕಾರ ಅಪ್ರಾಮಾಣಿಕ, ಮೌಲ್ಯರಹಿತ ಸರಕಾರ: ಆರೆಸ್ಸೆಸ್

ಬುಧವಾರ, 1 ಜುಲೈ 2015 (17:47 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭ್ರಷ್ಟಾಚಾರ ಮತ್ತು ಅಸಭ್ಯತೆಯಿಂದ ವರ್ತಿಸುತ್ತಿರುವ ಸಚಿವರ ರಕ್ಷಣೆ ಮಾಡುತ್ತಿದೆ ಇದೊಂದು ಅಪ್ರಾಮಾಣಿಕ ಸರಕಾರ. ಇಂತಹ ಸರಕಾರಕ್ಕೆ ಬೆಲೆಯಿಲ್ಲ ಎಂದು ರಾಷ್ಟ್ರೀಯ ಸ್ವಂಯ ಸೇವಕ ಸಂಘ ಮುಖಂಡ ಹಾಗೂ ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎನ್.ಗೋವಿಂದಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. 
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರಕಾರ ಭ್ರಷ್ಟ ಸಚಿವರಿಗೆ ರಕ್ಷಣೆ ನೀಡಿ ರಾಜಕೀಯ ಅಪ್ರಾಮಾಣಿಕತೆಯನ್ನು ಮೆರೆಯುತ್ತಿದೆ. ಇದೊಂದು ಏಕವ್ಯಕ್ತಿಯ ಅಧಿಕಾರ ಕೇಂದ್ರಿಕೃತ ಸರಕಾರ ಎಂದು ಗುಡುಗಿದ್ದಾರೆ.
 
ಇದೊಂದು ಅಧಿಕಾರ ಕೇಂದ್ರೀಕೃತ ಸರಕಾರವೇ ಹೊರತು ಜನತೆಯ ಅಧಿಕಾರದ ಸರಕಾರವಲ್ಲ. ರಾಜಕೀಯ, ಪ್ರಾಮಾಣಿಕತೆಯ ಮೌಲ್ಯಗಳಿಗೆ ತಿಲಾಂಜಲಿ ಇಡಲಾಗಿದೆ. ಕೇವಲ ಭ್ರಷ್ಟಾಚಾರಿಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.   
 
ಲಲಿತ್ ಮೋದಿ ವಿವಾದದಲ್ಲಿ ಸಿಲುಕಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧದ ಆರೋಪಗಳ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜೀನಾಮೆ ನೀಡಲು ಇದು ಯುಪಿಎ ಸರಕಾರವಲ್ಲ, ಎನ್‌ಡಿಎ ಸರಕಾರ ಎಂದು ಕೇಂದ್ರ ಗೃಹ ಸಚಿವರೇ ಹೇಳುತ್ತಿರುವುದು ಅತ್ಯಂತ ನಾಚಿಕೆಗೇಡಿತನದ ಸಂಗತಿ ಎಂದರು.  
 
ಸಾಮಾನ್ಯ ಜನತೆಯ ಕಣ್ಣಲ್ಲಿ ಅಪರಾಧಿಯಾಗಿರುವ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಮೋದಿ ಅವರನ್ನು ವಜಾಗೊಳಿಸಬೇಕು ಎಂದು ಆರೆಸ್ಸೆಸ್ ನಾಯಕ ಕೆಎನ್.ಗೋವಿಂದಾಚಾರ್ಯ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ