ಮೋದಿ, ಜಂಗ್ ಮತ್ತು ದೆಹಲಿ ಪೊಲೀಸರೇ ಆಪ್ ಕಾರಿನ ಸ್ಪೀಡ್ ಬ್ರೇಕರ್ಸ್: ಅರವಿಂದ ಕೇಜ್ರಿವಾಲ್

ಮಂಗಳವಾರ, 4 ಆಗಸ್ಟ್ 2015 (17:00 IST)
ಪ್ರಧಾನಿ ನರೇಂದ್ರ ಮೋದಿ, ದೆಹಲಿ ಉಪರಾಜ್ಯಪಾಲರಾದ ನಜೀಬ್ ಜಂಗ್ ಮತ್ತು ದೆಹಲಿ ಪೊಲೀಸರು ವೇಗವಾಗಿ ಚಲಿಸ ಬಯಸುವ ಆಪ್ ಕಾರಿನ ಸ್ಪೀಡ್ ಬ್ರೇಕರ್ ಆಗಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 

'ಆಪ್ ಸರ್ಕಾರಕ್ಕೆ ಕೆಲಸ ಮಾಡಲು ಬಿಡಬಾರದು ಎನ್ನುವುದು ಬಿಜೆಪಿಯ ಏಕೈಕ ಕಾರ್ಯಸೂಚಿ. ನಾನು ಎಷ್ಟು ಬಾರಿ ವಿನಂತಿಸದರೂ ಮೋದಿಯವರು ದೆಹಲಿ ಪೊಲೀಸ್ ನಿಯಂತ್ರಣವನ್ನು ನಮಗೊಪ್ಪಿಸಲು ತಯಾರಿಲ್ಲ. ದೆಹಲಿಯನ್ನು ಸುರಕ್ಷಿತ ನಗರವನ್ನಾಗಿಸುವುದು ನಮ್ಮ ಉದ್ದೇಶ', ಎಂದಿದ್ದಾರೆ  ಕೇಜ್ರಿವಾಲ್. 
 
"ಬದುಕು ಧನಾತ್ಮಕ ಚಿಂತನೆಯ ತಳಹದಿಯ ಮೇಲೆ ನಡೆಯುತ್ತದೆ. ನಮ್ಮ ಆಡಳಿತದ ಕಾರ್ ಅತಿ ವೇಗದಲ್ಲಿ ಚಲಿಸುತ್ತಿದೆ. ನಾವು ಜನಸ್ನೇಹಿ ಆಸ್ಪತ್ರೆಗಳನ್ನು ತೆರೆದೆವು, ಭೃಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡೆವು. ಆದರೆ ಎಲ್‌ಜಿ, ಎಸಿಬಿ ಮುಖ್ಯಸ್ಥ ಎಮ್.ಕೆ. ಮೀನಾ ಮತ್ತು ದೆಹಲಿ ಪೊಲೀಸ್ ಕಮಿಷನರ್ ಬಿ.ಎಸ್.ಬಸ್ಸಿ  ನಮ್ಮ ಕಾರ್ ವೇಗಕ್ಕೆ ಅಡ್ಡಿಯಾಗಿದ್ದಾರೆ. ಆದರೆ ನಮ್ಮ ಆಡಳಿತದ ಕಾರ್ ಅಭಿವೃದ್ಧಿ ಎಡೆ ಸಾಗಲಿದೆ", ಎಂದು ಕೇಜ್ರಿವಾಲ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ. 
 
ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರ ಭದ್ರತೆಯ ಬಗೆಗಿನ ಚರ್ಚೆಯಲ್ಲಿ ಕೇಜ್ರಿವಾಲ್ ಮಾತನಾಡುತ್ತಿದ್ದರು. 
 
"ದೆಹಲಿಯನ್ನು 6 ತಿಂಗಳಲ್ಲಿ ಸುರಕ್ಷಿತ ನಗರವನ್ನಾಗಿಸಿ. ಇಲ್ಲದಿದ್ದರೆ ದೆಹಲಿ ಪೊಲೀಸ್‌ನ್ನು ನಮ್ಮ ನಿಯಂತ್ರಣಕ್ಕೆ ನೀಡಿ.ನಾವು ದೆಹಲಿಯನ್ನು 6 ತಿಂಗಳಲ್ಲಿ ಸುರಕ್ಷಿತ ನಗರವನ್ನಾಗಿಸುತ್ತೇವೆ ಎಂದು ನಾನು ಪ್ರಧಾನಿಯವರಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ", ಎಂದು ಆಪ್ ನಾಯಕ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ