ಸ್ವಚ್ಛ ಭಾರತ ಅಭಿಯಾನದಲ್ಲಿ ಮೇರಿ ಕೋಮ್‌: ಕೊಂಡಾಡಿದ ಮೋದಿ

ಶನಿವಾರ, 25 ಅಕ್ಟೋಬರ್ 2014 (11:07 IST)
ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ಬಾಕ್ಸಿಂಗ್ ಐಕಾನ್ ಮೇರಿ ಕೋಮ್ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಪ್ರಧಾನಿ ನರೇಂದ್ರ ಮೋದಿ ಮನಸಾರೆ ಕೊಂಡಾಡಿದ್ದಾರೆ. 

"ಮೇರಿ ಕೋಮ್ ಅವರ ಈ ಪ್ರಯತ್ನಇಂಫಾಲ್‌ನ ಜನತೆಗೆ ಸ್ವಚ್ಛ ಭಾರತ್ ಮಿಷನ್ ಸೇರಲು ಪ್ರಚೋದನೆಯನ್ನು ನೀಡಲಿದೆ" ಎಂದು  ಮೋದಿ ಟ್ವೀಟ್ ಮಾಡಿದ್ದಾರೆ. 
 
ಬಾಕ್ಸಿಂಗ್ ತಾರೆ ಮತ್ತು ನಾಯ್ಡು ಕೆಲಸದ ಬಗ್ಗೆ ಪತ್ರಿಕಾ ವರದಿಗಾರರ ಜತೆ ಹಂಚಿಕೊಂಡ ಮೋದಿ "ಚಂಡಮಾರುತ ಪೀಡಿತ ವಿಶಾಖಪಟ್ಟಣಂನ ಬೀಚ್ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ವೆಂಕಯ್ಯ (ಜಿ), ಉತ್ತಮ ಪ್ರಯತ್ನ ಮಾಡಿದ್ದಾರೆ " ಎಂದು ತಮ್ಮ ಸಹೋದ್ಯೋಗಿಯನ್ನು ಹೊಗಳಿದ್ದಾರೆ.
 
ದೀಪಾವಳಿಯನ್ನು ಆಚರಿಸಲು ಮೋದಿ ಕಾಶ್ಮೀರದ ಪ್ರವಾಹ ಪೀಡಿತ ಪ್ರದೇಶಗಳತ್ತ ಸಾಗಿದರೆ, ನಾಯ್ಡು ಹುಡ್‌ಹುಡ್‌ ಚಂಡಮಾರುತದಿಂದ ಬಾಧಿಸಲ್ಪಟ್ಟ ವಿಶಾಖಪಟ್ಟಣಂಗೆ ಧಾವಿಸಿದ್ದರು. 
 
ಜೊತೆಗೆ, ಕ್ಲೀನ್ ಇಂಡಿಯಾ ಅಭಿಯಾನದ ಮುಂದಾಳತ್ವ ತೆಗೆದುಕೊಂಡ ರಾಘವೇಂದ್ರ ಮಠವನ್ನು ಕೂಡ ಮೋದಿ ಶ್ಲಾಘಿಸಿದ್ದಾರೆ. 
 
"ಶ್ರೀ ರಾಘವೇಂದ್ರ ಮಠದ ಈ ಪ್ರಯತ್ನ ಕ್ಲೀನ್ ಇಂಡಿಯಾ ಮಿಶನ್‌ನ ಹೆಜ್ಜೆಗಳಲ್ಲಿ  ಹೆಗ್ಗುರುತಾಗಲಿದೆ", ಎಂದು ಮೋದಿಯವರ ಮತ್ತೊಂದು ಟ್ವೀಟ್ ಹೇಳುತ್ತದೆ. 
 
ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಹಾತ್ವಾಕಾಂಕ್ಷೆಯ  ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 

ವೆಬ್ದುನಿಯಾವನ್ನು ಓದಿ