ಅಮೆರಿಕ ಪ್ರವಾಸದಲ್ಲಿ ದ್ರವಾಹಾರ ಸೇವಿಸಲಿರುವ ನರೇಂದ್ರ ಮೋದಿ

ಮಂಗಳವಾರ, 23 ಸೆಪ್ಟಂಬರ್ 2014 (10:36 IST)
ನರೇಂದ್ರ ಮೋದಿ ಅಮೆರಿಕ ಪ್ರವಾಸ ಹಮ್ಮಿಕೊಂಡಿದ್ದಾರೆ. ಆದರೆ ಅಮೆರಿಕ ಪ್ರವಾಸದ ಭೋಜನಕೂಟದಲ್ಲಿ ಭಾಗವಹಿಸಿ ಬಗೆ ಬಗೆಯ ತಿನಿಸುಗಳನ್ನು ಸೇವಿಸುವ ಅವಕಾಶ ಮೋದಿಗೆ ತಪ್ಪಿಹೋಗಿದೆ. ಏಕೆಂದರೆ ಇದೇ  ಸಂದರ್ಭದಲ್ಲಿ ಕಠಿಣವಾದ ನವರಾತ್ರಿ ಉಪವಾಸ ಆಚರಣೆಯನ್ನು ಮೋದಿ ಮಾಡಲೇಬೇಕಾಗಿದೆ.

 ಕಳೆದ ನಲ್ವತ್ತು ವರ್ಷಗಳಿಂದ ಸತತವಾಗಿ ಪಾಲಿಸಿಕೊಂಡು ಬಂದ ನವರಾತ್ರಿ ಉಪವಾಸ ವ್ರತವನ್ನು ಮೋದಿ ಈ ವರ್ಷ ಕೈಬಿಡುವಂತಿಲ್ಲ. ಆದರೆ ಅಮೆರಿಕ ಪ್ರವಾಸದಲ್ಲಿ  ಇದೊಂದು ಅವರ ದೈಹಿಕ ಸಾಮರ್ಥ್ಯ ಮತ್ತು ಶಿಷ್ಟಾಚಾರ ಪಾಲನೆಗೆ ಒಂದು ಅಗ್ನಿಪರೀಕ್ಷೆಯಾಗಿದೆ. ಅವರು ಪ್ರವಾಸ ಕಾಲದಲ್ಲಿ ಯಾವುದೇ ಗಟ್ಟಿ ಆಹಾರ ಸೇವಿಸದೇ ದ್ರವಾಹಾರ ಮಾತ್ರ ಸೇವಿಸಲಿದ್ದಾರೆ. 
 
 ಪ್ರಧಾನಮಂತ್ರಿ ಪ್ರತಿದಿನ ನಿಂಬೆಪಾನಕ, ಜೇನುತುಪ್ಪ ಹಾಗೂ ಒಂದು ಕಪ್ ಚಹಾವನ್ನು ನವರಾತ್ರಿ ಉತ್ಸವದ ಉದ್ದಕ್ಕೂ(ಸೆ.25ರಿಂದ ಅಕ್ಟೋಬರ್ 3) ಸೇವಿಸಲಿದ್ದಾರೆ. ಅಮೆರಿಕ ಪ್ರವಾಸ ಮಾಡುತ್ತಿರುವುದರಿಂದ ಪಥ್ಯದಲ್ಲಿ ಬದಲಾವಣೆ ಮಾಡಿ ಹಣ್ಣುಗಳನ್ನು ಮತ್ತು ತಂಪುಪಾನೀಯಗಳನ್ನು ತಿನ್ನಿರಿ ಎಂದು ವೈದ್ಯರು ಸಲಹೆ ಮಾಡಿದ್ರೂ ಮೋದಿ ಸುತಾರಾಂ ಒಪ್ತಿಲ್ಲವಂತೆ. 
 
 ನವರಾತ್ರಿಯ ವೇಳಾಪಟ್ಟಿಯಲ್ಲಿ ನ್ಯೂಯಾರ್ಕ್ ಮ್ಯಾಡಿಸನ್ ಚೌಕದಲ್ಲಿ ಭಾರತೀಯ ಅಮೆರಿಕನ್ನರ ರ‌್ಯಾಲಿ, ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ಬರಾಕ್ ಒಬಾಮಾ ಜೊತೆ ಮಾತುಕತೆ ಎಲ್ಲವೂ ಒಳಗೊಂಡಿದ್ದು, ಕೇವಲ ದ್ರವಾಹಾರ ಸೇವನೆ ಮಾಡಿ ಇವೆಲ್ಲವನ್ನೂ ನಿಭಾಯಿಸಬೇಕಿದೆ.ಮೋದಿಯ ಕೆಲವು ಹಿತರಕ್ಷಕರು ವಿಟಮಿನ್ ನೀರನ್ನಾದರೂ ಕುಡಿಯಿರಿ ಎಂದು ಸಲಹೆ ಮಾಡಿದ್ದರೂ ಮೋದಿ ಅದಕ್ಕೆ ಹೌದು ಅಥವಾ ಇಲ್ಲವೆಂದೂ ಉತ್ತರಿಸಿಲ್ಲ.

ಮೋದಿ ಸಾಮಾನ್ಯವಾಗಿ ಮುಂಜಾನೆ 4ಕ್ಕೆ ಏಳುತ್ತಾರೆ.ನಂತರ ಧ್ಯಾನ ಮತ್ತು ಪ್ರಾರ್ಥನೆ ಮುಗಿಸುತ್ತಾರೆ. ಹೋದ ಕಡೆಯಲ್ಲೆಲ್ಲಾ ಮೋದಿ ನಿಂಬೆ ಪಾನಕ ಸೀಸೆ ಜೊತೆಯಲ್ಲಿರುತ್ತದೆ ಎಂದು ಮೋದಿ ಜೊತೆ 10 ವರ್ಷಗಳ ನಿಕಟ ಸಂಪರ್ಕ ಹೊಂದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

 ಮೋದಿ 2012ರಲ್ಲಿ ಬರೆದಿದ್ದ ಬ್ಲಾಗ್‌ನಲ್ಲಿ ಇಂತಹ ಉಪವಾಸಗಳ ಬಗ್ಗೆ  " ಇದೊಂದು ಸ್ವಯಂ ಶುದ್ದೀಕರಣ ಕ್ರಿಯೆ. ಕಳೆದ 35 ವರ್ಷಗಳಿಂದ ಆಚರಿಸಿದ್ದೇನೆ. ಇದು ನನಗೆ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದೆ" ಎಂದು ಹೇಳಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ