ಸ್ವಚ್ಛ ಭಾರತ ಅಭಿಯಾನ: ಪೊರಕೆ ಹಿಡಿದ ಸಲ್ಮಾನ್‌ಗೆ ಮೋದಿ ಶ್ಲಾಘನೆ

ಬುಧವಾರ, 22 ಅಕ್ಟೋಬರ್ 2014 (12:54 IST)
"ಸ್ವಚ್ಛ ಭಾರತ್" ಅಭಿಯಾನದಲ್ಲಿ ತನ್ನನ್ನು ತೊಡಗಿಸಿಕೊಂಡ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಈ ನಡೆ ಇತರರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದ್ದಾರೆ. 

ಸಲ್ಮಾನ್ ಖಾನ್ ಅವರ ಈ ಪ್ರಯತ್ನ ಗಮನಾರ್ಹವಾದುದು, ಇದು ಹಲವಾರು ಜನರು ಸ್ವಚ್ಛ ಭಾರತ್ ಮಿಷನ್ ಸೇರಲು ಸ್ಫೂರ್ತಿಯಾಗಲಿದೆ,"  ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
 
ಸಲ್ಮಾನ್ ಖಾನ್ ಮಂಗಳವಾರ ಮುಂಬೈನ ಕರ್ಜಾತ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ರಾಷ್ಟ್ರವ್ಯಾಪಿ ಆಂದೋಲನಕ್ಕೆ ತಮ್ಮ ಕೊಡುಗೆಯನ್ನು ನೀಡಿದರು. ನಟ ನೀಲ್ ನಿತಿನ್ ಮುಖೇಶ್ ಸೇರಿದಂತೆ ತಮ್ಮ ತಂಡದೊಂದಿದೆ ಕರ್ಜಾತ್ ಪ್ರದೇಶದ ಕೆಲ ಭಾಗಗಳಲ್ಲಿ ಪೊರಕೆ ಹಿಡಿದು ಕಸಗುಡಿಸಿ ಸ್ವಚ್ಛಗೊಳಿಸಿದ ಸಲ್ಮಾನ್, ಆ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
 
ಮೊದಲು ತನ್ನ ಫೇಸ್‌ಬುಕ್ ಅಭಿಮಾನಿಗಳು ಮತ್ತು ಟ್ವಿಟರ್ ಅನುಯಾಯಿಗಳನ್ನು ಅಭಿಯಾನದಲ್ಲಿ ಪಾಲ್ಗೊಳ್ಳಲು ನಾಮಿನೇಟ್ ಮಾಡಿದ ಅವರು ಪ್ರತಿಯೊಬ್ಬರು ಕೂಡ ಪರಿವರ್ತನೆ ಮಾಡಲು ಸಾಧ್ಯ ಎಂದು ಟ್ವಿಟ್ ಮಾಡಿದ್ದಾರೆ. 
 
ನಂತರ ಇನ್ನೂ ಎಂಟು ಜನರ ನಾಮನಿರ್ದೇಶನ ಮಾಡಿದ ಅವರು " ನಾನು ಅಮೀರ್ ಖಾನ್, ಅಜೀಮ್ ಪ್ರೇಮ್‌ಜಿ, ಚಂದಾ ಕೊಚ್ಚಾರ್, ಒಮರ್ ಅಬ್ದುಲ್ಲಾ, ಪ್ರದೀಪ್ ದೂತ್ ,ರಜತ್ ಶರ್ಮಾ,  ರಜನಿಕಾಂತ್ ಮತ್ತು ವಿನೀತ್ ಜೈನ್ ನಾಮಿನೇಟ್ " ಮಾಡುತ್ತಿದ್ದೇನೆ ಎಂದು ಟ್ವಿಟ್ ಮಾಡಿದ್ದರು. 
 
ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 

ವೆಬ್ದುನಿಯಾವನ್ನು ಓದಿ