ಅಣುಶಕ್ತಿ ಅವಶ್ಯಕ, ಆದ್ರೆ ಸ್ಥಳೀಯರ ಕಲ್ಯಾಣವನ್ನು ನಿರ್ಲಕ್ಷಿಸದಿರಿ ಎಂದ ಪ್ರಧಾನಿ ಮೋದಿ

ಮಂಗಳವಾರ, 22 ಜುಲೈ 2014 (18:08 IST)
ಪ್ರಧಾನಿಯಾದ ಬಳಿಕ ಪ್ರಥಮ ಬಾರಿ ಭಾಭಾ ಅಣು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಮೋದಿಯವರು ಪರಮಾಣು ಶಕ್ತಿಯಲ್ಲಿ ಅಂತರರಾಷ್ಟ್ರೀಯ ಸಹಯೋಗಕ್ಕೆ ಬೆಂಬಲ ನೀಡುವ ಮಾತುಗಳನ್ನಾಡಿದ್ದಾರೆ.  ಪ್ರಸ್ತುತ ಉತ್ಪಾದನೆಯಾಗುತ್ತಿರುವ 5,780 ಮೆಗಾವ್ಯಾಟ್ ಪರಮಾಣು ವಿದ್ಯುತ್‌ನ್ನು ಮೂರು ಪಟ್ಟು ಹೆಚ್ಚು ಉತ್ಪಾದಿಸುವ ದೇಶದ ಗುರಿ ಈಡೇರುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. 
 
ಆದರೆ ಯೋಜನೆ ಮತ್ತು ಅಣುಶಕ್ತಿ ಯೋಜನೆಗಳನ್ನು ನಿರ್ವಹಿಸುವಾಗ ಸ್ಥಳೀಯ ಸಮುದಾಯಗಳ ಕಲ್ಯಾಣಕ್ಕೆ ವಿಶೇಷ ಗಮನ ನೀಡಿರೆಂದು ಪರಮಾಣು ಶಕ್ತಿ ವಿಭಾಗಕ್ಕೆ ಅವರು ಸೂಚನೆ ನೀಡಿದ್ದಾರೆ. 
 
ಮೋದಿ ಅವರು ಅಂತರರಾಷ್ಟ್ರೀಯ ಸಹಯೋಗದ ಬಗ್ಗೆ ಉಲ್ಲೇಖಿಸಿರುವುದು ಹಿಂದಿನ ಪ್ರಧಾನಿ, ಮನಮೋಹನ್ ಸಿಂಗ್ ಅವರ ಸಮಯದಲ್ಲಿ ನಡೆದ ವಿವಾದಾತ್ಮಕ  ಇಂಡೋ - ಯುಎಸ್  ಅಣು ಒಪ್ಪಂದವನ್ನು ಮುಂದುವರೆಸಲಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡಿದೆ. 
 
ಸೆಪ್ಟೆಂಬರ್ ತಿಂಗಳಲ್ಲಿ ಮೋದಿ ಮತ್ತು ಒಬಾಮಾ ಭೇಟಿ ನಡೆಯಲಿದ್ದು ಆ ಸಮಯದಲ್ಲಿ ಪರಮಾಣು ಶಕ್ತಿಗೆ ಸಂಬಂಧಿಸಿದ  ಮಾತುಕತೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. 
 
ಮೋದಿಯವರ ಹೇಳಿಕೆ ರತ್ನಗಿರಿ ಜಿಲ್ಲೆಯಲ್ಲಿ ಜೈತಾಪುರ ಪರಮಾಣು ರಿಯಾಕ್ಟರ್ ಸ್ಥಾಪನೆಯನ್ನು ಪುಷ್ಠಿ ಕರಿಸಿದೆ. "ಜೈತಾಪುರ ಇಲ್ಲದೆ, ಸುಮಾರು 18,000 ಮೆಗಾವ್ಯಾಟ್ ಅಣು ವಿದ್ಯುತ್  ಉತ್ಪಾದಿಸುವ ಗುರಿ ಸಾಧಿಸುವುದು  ಕಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ.  

ವೆಬ್ದುನಿಯಾವನ್ನು ಓದಿ