ಪ್ಯಾರಿಸ್: ಪ್ರಧಾನಿ ಮೋದಿ, ನವಾಜ್ ಷರೀಫ್ ಪರಸ್ಪರ ಹಸ್ತ ಲಾಘವ

ಸೋಮವಾರ, 30 ನವೆಂಬರ್ 2015 (17:15 IST)
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ರಿಕ್ತ ವಾತಾವರಣದ ಪರಿಸ್ಥಿತಿಯ ಮಧ್ಯೆಯೂ ಪ್ರಧಾನಿ ಮೋದಿ, ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾವೇ ಒಂದು ಹೆಜ್ಜೆ ಮುಂದೆ ಹೋಗಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿಯಾಗಿದ್ದಾರೆ.
  
ಉಭಯ ದೇಶಗಳ ಪ್ರಧಾನಿಗಳು ಪರಸ್ಪರ ಹಸ್ತಲಾಘವ ಮಾಡುವ ಮೂಲಕ, ಕೆಲ ಕಾಲ ಮಾತುಕತೆಯಲ್ಲಿ ತಲ್ಲೀನರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಯಾವ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು ಎನ್ನುವ ಮಾಹಿತಿ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಪ್ರಧಾನಿ ಮೋದಿ ಮತ್ತು ನವಾಜ್ ಷರೀಫ್ ಮಧ್ಯೆ ಯಾವುದೇ ಅಧಿಕೃತ ಮಾತುಕತೆಯ ಬಗ್ಗೆ ಸಮಯ ನಿಗದಿಯಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ. 
 
ಆದರೆ,ಭಾರತದೊಂದಿಗೆ ಪಾಕಿಸ್ತಾನ ಬೇಷರತ್ತು ಮಾತುಕತೆಗೆ ಸಿದ್ದವಿದೆ ಎನ್ನುವ ಷರೀಫ್ ಹೇಳಿಕೆಯಿಂದಾಗಿ ಉಭಯ ನಾಯಕರ ಮಧ್ಯೆ ಮಾತುಕತೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
 
ನೆರೆಯ ರಾಷ್ಟ್ರವಾದ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವುದು, ಉಗ್ರರಿಗೆ ಪರೋಕ್ಷವಾಗಿ ನೆರವಾಗುತ್ತಿರುವುದರಿಂದ ಉಭಯ ದೇಶಗಳ ಮಧ್ಯೆ ಉದ್ರಿಕ್ತ ವಾತಾವರಣ ಉಂಟಾಗಿದೆ.

ವೆಬ್ದುನಿಯಾವನ್ನು ಓದಿ