ಕಲಾಂ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ

ಬುಧವಾರ, 29 ಜುಲೈ 2015 (17:15 IST)
ನಾಳೆ ಮಧ್ಯಾಹ್ನ ರಾಮೇಶ್ವರಂನಲ್ಲಿ ನಡೆಯಲಿರುವ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ನಾಳೆ 9.30 ರ ಸುಮಾರಿಗೆ ಅವರು ವಿಶೇಷ ವಿಮಾನದ ಮೂಲಕ ಮಧುರೈ ತಲುಪಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ  ರಾಮೇಶ್ವರಂಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭದ್ರತಾಧಿಕಾರಿಗಳು ನೀಡಿರುವ ಎಚ್ಚರಿಕೆಯ ಹೊರತಾಗಿಯೂ ಮೋದಿಯವರು ತಮ್ಮ ಪ್ರಯಾಣಕ್ಕೆ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
 
ಮೋದಿಯವರ ಆಗಮನವನ್ನು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ವೆಂಕಯ್ಯ ನಾಯ್ಡು  ಸ್ಪಷ್ಟ ಪಡಿಸಿದ್ದಾರೆ. 
 
ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಈ ಕಲಾಂ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ. 
 
ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನದಿಂದ ಸನ್ಮಾನಿತರಾಗಿದ್ದ, ಕಲಾಂ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ಮೋದಿ  ತಮ್ಮ ಬ್ಲಾಗ್‌ನಲ್ಲಿ "ಭಾರತ ತನ್ನ ರತ್ನವನ್ನು ಕಳೆದುಕೊಂಡಿದೆ", ಎಂದು ಉದ್ಘರಿಸಿದ್ದರು.
 
"ನಮ್ಮ ವಿಜ್ಞಾನಿ-ರಾಷ್ಟ್ರಪತಿ -  ಜನಸಾಮಾನ್ಯರ ಪ್ರಾಮಾಣಿಕ ಪ್ರೀತಿಯನ್ನು, ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ವಸ್ತು ಆಸ್ತಿ ಮೂಲಕ ಯಶಸ್ಸನ್ನು ಅವರೆಂದೂ  ಅಳೆಯಲಿಲ್ಲ", ಎಂದು ಪ್ರಧಾನಿ ,ಕಲಾಂ ಅವರನ್ನು ನೆನಪಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ