ಚಾಯಿ ಪೇ ಚರ್ಚಾ: ಸೋನಿಯಾ, ಮನಮೋಹನ್ ಸಿಂಗ್‌ಗೆ ಪ್ರಧಾನಿ ಮೋದಿ ಆಹ್ವಾನ

ಶುಕ್ರವಾರ, 27 ನವೆಂಬರ್ 2015 (16:33 IST)
ಚಳಿಗಾಲದ ಅಧಿವೇಶನದಲ್ಲಿ ಜಿಎಸ್‌ಟಿ ಮಸೂದೆ ಮಂಡನೆಗೆ ಸಿದ್ದವಾಗಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ, ಇದೀಗ ಕಾಂಗ್ರೆಸ್ ಪಕ್ಷವನ್ನು ಓಲೈಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಚಾಯಿ ಪೇ ಚರ್ಚೆಗೆ ಆಹ್ವಾನ ನೀಡಿದೆ.   
ಹಣಕಾಸು ಸಚಿವರಿಗೆ ಕಾಂಗ್ರೆಸ್ ಪಕ್ಷ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ರೇಸ್‌ಕೋರ್ಸ್ ರಸ್ತೆಯಲ್ಲಿರುವ ನಿವಾಸಕ್ಕೆ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿದ್ದಾರೆ. 
 
ಪ್ರಧಾನಿ ಮೋದಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿರುವುದನ್ನು ಖಚಿತಪಡಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೇಳಿಕೆ ನೀಡಿ, ಸಂಸತ್ತಿನಲ್ಲಿ ನೆನೆಗುದಿಯಲ್ಲಿ ಮಸೂದೆಗಳ ಬಗ್ಗೆ ಚರ್ಚಿಸಲು ಸೋನಿಯಾ, ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಆಹ್ವಾನ ನೀಡಿದ್ದಾರೆ. ಸಂಸತ್ತಿನ ಕಲಾಪ ಸುಗಮವಾಗಿ ನಡೆಯಬೇಕು ಎನ್ನುವುದೇ ಪ್ರತಿಯೊಬ್ಬ ಸಂಸದನ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ.
 
ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿ ಜಿಎಸ್‌ಟಿ ಮಸೂದೆ ಬಗ್ಗೆ ಚರ್ಚಿಸಿದ್ದಾರೆನ್ನಲಾಗಿದೆ. ಸೋನಿಯಾ ಅವರೊಂದಿಗೆ ಚರ್ಚೆ ನಡೆಸುವುದಾಗಿ ಮನಮೋಹನ್ ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
 
ಜಿಎಸ್‌ಟಿ ಮಸೂದೆ ಜಾರಿಗೆ ಪ್ರಧಾನಿ ಮೋದಿ ಎಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಲು ಸಿದ್ದವಾಗಿದ್ದಾರೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ