ಮೋದಿ ಭಾರತವನ್ನು ಹಿಂದು ರಾಷ್ಟ್ರವಾಗಿ ಪರಿವರ್ತಿಸಲಿದ್ದಾರೆ: ವಿವಾದ ಸೃಷ್ಟಿಸಿದ ಗೋವಾ ಸಚಿವ

ಶುಕ್ರವಾರ, 25 ಜುಲೈ 2014 (11:41 IST)
ಗೋವಾದ ಸಮುದ್ರ ತೀರಗಳಲ್ಲಿ ಬಿಕಿನಿಗೆ ನಿಷೇಧ ಹೇರಬೇಕು  ಎಂದು ಒತ್ತಾಯಿಸುವುದರ ಮೂಲಕ ಗೋವಾದ ಮಂತ್ರಿ ಸುದೀನ್ ಧವಳೀಕರ್  ವಿವಾದವನ್ನು ಸೃಷ್ಟಿಸಿದ ಬೆನ್ನ ಹಿಂದೆಯೇ, ಅವರ ಸಹೋದರ, ಸಹೋದ್ಯೋಗಿ  ಮಂತ್ರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸಲಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳುವ ಮೂಲಕ ಮತ್ತೊಂದು ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. 

ರಾಜ್ಯದ ವಿಧಾನಸಭೆ ಕಲಾಪದ ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದ, ದೀಪಕ್ ಧವಳೀಕರ್ "ಮೋದಿಯವರ ನಾಯಕತ್ವದಲ್ಲಿ  ಭಾರತ ಹಿಂದು ರಾಷ್ಟ್ರವಾಗಿ ಬೆಳವಣಿಗೆ ಕಾಣಲಿದೆ. ಈ ದಿಶೆಯಲ್ಲಿ ಪ್ರಧಾನಿ ಮೋದಿಯವರು ಹೆಜ್ಜೆ ಇರಿಸಲಿದ್ದಾರೆ ಎಂದು ನನಗೆ ವಿಶ್ವಾಸವಿದೆ" ಎಂದು ಹೇಳಿದರು. 
 
ಧವಳೀಕರ್ ಸಹೋದರರಾದ ಸುದೀನ್ ಮತ್ತು ದೀಪಕ್  ಬಿಜೆಪಿಯ ಮಿತ್ರಪಕ್ಷವಾದ ಗೋಮಾಂತಕ ಪಾರ್ಟಿಗೆ ಸೇರಿದವರಾಗಿದ್ದು, ಮನೋಹರ್ ಫರಿಕ್ಕರ್ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. 
 
ಗೋವಾ ಬೀಚ್‌ಗಳಲ್ಲಿ ಈಜುಡುಗೆ ತೊಡುವುದನ್ನು ನಿಷೇಧಿಸುವಂತೆ ಆಗ್ರಹಿಸಿ ದೀಪಕ್ ಸಹೋದರ ಸುದೀನ್  ಈ ತಿಂಗಳ ಆರಂಭದಲ್ಲಿ ವಿವಾದಕ್ಕೆ ಕಾರಣವಾಗಿದ್ದರು. ಅದಕ್ಕಿಂತ ಮೊದಲು ಅವರು ಹುಡುಗಿಯರು ಪಬ್‌ಗಳಿಗೆ ಹೋಗಬಾರದು, ಅದು ಗೋವಾ ಸಂಸ್ಕೃತಿಗೆ ವಿರೋಧ ಎಂದು ಹೇಳಿದ್ದರು.

ವೆಬ್ದುನಿಯಾವನ್ನು ಓದಿ