ಮೊಮ್ಮಗಳಿಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದ ಅಜ್ಜಿ

ಶನಿವಾರ, 2 ಮೇ 2015 (12:21 IST)
ನನ್ನ ಮೊಮ್ಮಗಳಿಗೆ ನ್ಯಾಯ ಸಿಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಳೆದ ವಾರ ಪಂಜಾಬ್‌ನ ಮೋಗಾದಲ್ಲಿ ಬಸ್‌ನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿ ಕೆಳಕ್ಕೆ ಬಿದ್ದು ಸಾವಿಗೀಡಾದ ಬಾಲಕಿಯ ಅಜ್ಜಿ ಸುರ್ಜಿತ್ ಕೌರ್ ಎಚ್ಚರಿಕೆ ನೀಡಿದ್ದಾರೆ.


 
ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮೃತ ಬಾಲಕಿಯ ಪೋಷಕರು ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
 
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸದ ಬಾಲಕಿಯ ತಂದೆ, "ನಮಗೆ ನ್ಯಾಯ ಬೇಕು. ಬಸ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಅವರದ್ದಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ತಮ್ಮ ಮಗಳ ಅಂತಿಮ ಸಂಸ್ಕಾರ ನಡೆಸುವುದಿಲ್ಲ. ಆರ್ಬಿಟ್ ಅವಿಯೇಷನ್ ಬಸ್ ಪರವಾನಿಗೆಗಳನ್ನು ರದ್ದು ಪಡಿಸಬೇಕು. 50 ಲಕ್ಷ ಪರಿಹಾರ ಧನ ನೀಡಬೇಕು. ಜತೆಗೆ ತಮ್ಮ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ನೌಕರಿ ಕೊಡಿಸಬೇಕು ಎಂದು ಹಠ ಹಿಡಿದಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷೆಗೆ ಸಹ ಕುಟುಂಬದವರು ಅನುಮತಿ ನೀಡಿರಲಿಲ್ಲ. 
 
ಪಂಜಾಬ್‌ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ಮತ್ತು ರಾಜೇಶ್ ಬಘಾ ಮೃತಳ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಗಾಯಗೊಂಡಿರುವ ಮಹಿಳೆಯ ಚಿಕಿತ್ಸೆಗೆ 1.20 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದಾರೆ.
 
ಘಟನೆಯ ಕುರಿತು ಮಾತನಾಡಿರುವ ಬಸ್ ಸಂಸ್ಥೆಯ ಮಾಲೀಕ ಮತ್ತು ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್, "ಈ ಘಟನೆ ನನಗೆ ಆಘಾತವನ್ನುಂಟು ಮಾಡಿದೆ. ಬಾಲಕಿಯ ಸಾವಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ'', ಎಂದು ಭರವಸೆ ನೀಡಿದ್ದಾರೆ.
 
ಘಟನೆ ನಡೆದು 15 ತಾಸುಗಳ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆ ಯತ್ನ), 354 (ಮಹಿಳಾ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ