ಆರೋಪಿಯನ್ನೇ ಮದುವೆಯಾದ ರೇಪ್ ಪೀಡಿತೆ

ಶನಿವಾರ, 9 ಜನವರಿ 2016 (15:36 IST)
ಆರೋಪಿ ಜತೆ ರಾಜಿ ಸಂಧಾನ ಮಾಡಿಕೊಂಡು ಆತನನ್ನು ಮದುವೆಯಾಗು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಸೂಚನೆಯನ್ನು ತಿರಸ್ಕರಿಸಿ ಕಾನೂನು ಹೋರಾಟವನ್ನು ಮುಂದುವರೆಸಿದ್ದ ಅತ್ಯಾಚಾರ ಪೀಡಿತಳ ಪ್ರಕರಣ ಕಳೆದ ಕೆಲ ತಿಂಗಳ ಹಿಂದೆ ಇಡೀ ದೇಶದ ಗಮನ ಸೆಳೆದಿತ್ತು. ಹೈಕೋರ್ಟ್ ಆಕೆಗೆ ನೀಡಿದ್ದ ನಿರ್ದೇಶನವೂ  ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಆದರೆ ಅಂದು ಆರೋಪಿಯನ್ನು ಮದುವೆಯಾಗಲು ನಿರಾಕರಿಸಿದ್ದ ಪೀಡಿತೆ ಈಗ ಆತನನ್ನು ಮದುವೆಯಾಗಿದ್ದಾಳೆ.
 
22 ವರ್ಷದ ಸಂತ್ರಸ್ತೆ ಅತ್ಯಾಚಾರದಿಂದ ಹುಟ್ಟಿದ ಮಗನ ಭವಿಷ್ಯದ ದೃಷ್ಟಿಯಿಂದ ಅತ್ಯಾಚಾರ ಎಸಗಿದವನನ್ನೇ ಮದುವೆಯಾಗಿದ್ದಾಳೆ. ಆರೋಪಿಯ ವಿರುದ್ಧ ತಾನು ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆದುಕೊಂಡಿದ್ದಾಳೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಪೀಡಿತೆ 'ದೀರ್ಘ ಕಾಲ ಕಾನೂನು ಹೋರಾಟ ನಡೆಸುವ ಸ್ಥಿತಿಯಲ್ಲಿ ನಾನಿಲ್ಲ. ಮಗನ ಭವಿಷ್ಯಕ್ಕಾಗಿ ರಾಜಿಯಾಗಿದ್ದೇನೆ' ಎಂದು ಹೇಳಿದ್ದಾಳೆ. 
 
ಕಳೆದ ವರ್ಷ ಜೂನ್ 23 ರಂದು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ಪಿ. ದೇವದಾಸ್ ಅವರು ಸಂತ್ರಸ್ತೆಗೆ  ಆರೋಪಿಯ ಜತೆ ಸಂಧಾನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ತಾನು ಆಕೆಯನ್ನು ಮದುವೆಯಾಗುತ್ತೇನೆ. ನನ್ನನ್ನು ಬಿಡುಗಡೆ ಮಾಡಿ ಎಂದು ಆರೋಪಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಸರು ಪೀಡಿತೆಗೆ ಈ ಸೂಚನೆ ನೀಡಿದ್ದರು. ಆದರೆ ಪೀಡಿತೆ ಸಂಧಾನ ಮಾಡಿಕೊಳ್ಳಲು ನಿರಾಕರಿಸಿದ್ದಳು. 

ವೆಬ್ದುನಿಯಾವನ್ನು ಓದಿ