ಮೆದುಳು ನಿಷ್ಕ್ರಿಯಗೊಂಡ ಮಗನ ಅಂಗಾಂಗಗಳನ್ನು ದಾನ ಮಾಡಿದ ತಾಯಿ

ಶನಿವಾರ, 13 ಸೆಪ್ಟಂಬರ್ 2014 (12:27 IST)
ಸಹಿಸಲಾಗದ ದುಃಖದ ನಡುವೆಯೂ  ಮೆದುಳು ನಿಷ್ಕ್ರಿಯಗೊಂಡ  ತನ್ನ ಮಗನ ಅಂಗಾಂಗಗಳನ್ನು ದಾನ ಮಾಡಲು ತಾಯಿಯೊಬ್ಬಳು ಒಪ್ಪಿಗೆ ನೀಡಿದ್ದು, ಈ ಮೂಲಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅನೇಕ ಜೀವಗಳನ್ನು ಉಳಿಸಲು ಕಾರಣಳಾಗಿದ್ದಾಳೆ. 

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಮ್ ಪಕ್ಷಿರಾಜನ್  ಎಂಬ 30 ವರ್ಷದ ಯುವಕ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. 
 
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ  ಆತನನ್ನು ದಾಖಲು ಮಾಡಲಾಯಿತು. ಮೆದುಳಿನ ಶಸ್ತ್ರಚಿಕಿತ್ಸೆ ನಂತರವೂ ಪಕ್ಷಿರಾಜನ್ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ ಮತ್ತು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು  ಘೋಷಿಸಿದರು. 
 
ಆತನ ಸ್ಥಿತಿಯನ್ನು  ಕುಟುಂಬದ  ಸದಸ್ಯರಿಗೆ ವಿವರಿಸಿದ ವೈದ್ಯರು, ಪಕ್ಷಿರಾಜನ್ ದೇಹದ ಅಂಗಾಂಗಗಳನ್ನು ದಾನ ಮಾಡುವ ಸಲಹೆ ನೀಡಿದರು. 
 
ತನ್ನ ಮಗನ ಅಂಗಾಂಗ ದಾನದಿಂದ ಇತರರ ಜೀವಗಳನ್ನು ಉಳಿಸಬಹುದು ಎಂಬ ಸದುದ್ದೇಶದಿಂದ ಕರುಳು ಸುಡುವ ನೋವಿನಲ್ಲಿಯೂ ತಾಯಿ ಆತನ ಅಂಗಗಳನ್ನು ತೆಗೆದುಕೊಳ್ಳಲು ವೈದ್ಯರಿಗೆ ಅನುಮತಿ ನೀಡಿದರು. 
 
ತನ್ನ ವದ್ಧ ತಂದೆ ತಾಯಿಗಳನ್ನು ನೋಡಿಕೊಳ್ಳುವ ಉದ್ದೇಶದಿಂದ, ಅಮೇರಿಕಾದಲ್ಲಿ ದೊರಕಿದ್ದ ಉದ್ಯೋಗವನ್ನು ಆತ ತ್ಯಜಿಸಿದ್ದ ಎಂದು ಆತನ ಸಂಬಂಧಿಕರು ಗೋಳಾಡುತ್ತಾರೆ. ಅಲ್ಲದೇ ಒಂದು ವರ್ಷದ ಹಿಂದೆಯಷ್ಟೇ ಅವರಿಗೆ ಮದುವೆಯಾಗಿತ್ತು. 
 
8 ತಿಂಗಳ ಗರ್ಭಿಣಿಯಾಗಿರುವ ಆತನ ಪತ್ನಿ ಸೇರಿದಂತೆ, ಸಹೋದರಿಯರು ಮತ್ತು ಪರಿವಾರದ ಎಲ್ಲ ಸದಸ್ಯರು ಆತನ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಆತನ ಹೃದಯ, ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ಕಣ್ಣುಗಳನ್ನು ಕತ್ತರಿಸಿಕೊಳ್ಳಲಾಗುತ್ತದೆ ಮತ್ತು ನಂತರ ಬೇರೆ ರೋಗಿಗಳಿಗೆ ಕಸಿ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ